
ಬರೇಲಿ: 24 ವರ್ಷದ ಐಎಎಸ್ ಆಕಾಂಕ್ಷಿಯೊಬ್ಬರನ್ನು ಆಕೆಯ ವಿಕಲಚೇತನ ಸಹೋದರ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಗುರುವಾರ ಉತ್ತರ ಪ್ರದೇಶದ ಹರ್ಡೋಯ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳು, ಯುವತಿಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಗುಂಡು ಯುವತಿಗೆ ತಲೆಗೆ ಎಡಭಾಗದ ಮೂಲಕ ಪ್ರವೇಶಿಸಿದ್ದು, ಆಕೆಯ ಬಲಗೈಯಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಯಾಪುರ್ ಗ್ರಾಮದಲ್ಲಿರುವ ಆಕೆಯ ಪೋಷಕರ ಮನೆಯಲ್ಲಿ ಭಾನುವಾರ ಬೆಳಗ್ಗೆ ಮಾನ್ವಿ ಮಿಶ್ರಾ ಮೃತಪಟ್ಟಿರುವುದು ಪತ್ತೆಯಾಗಿದೆ.
ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಸಂಬಂಧಿಕರು ಹೇಳಿಕೊಂಡಿದ್ದರೂ, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕಾರಣ ಆಕೆಯನ್ನು ಕೊಲ್ಲಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸರ್ಕಲ್ ಆಫೀಸರ್(ಶಹಾಬಾದ್) ಅಲೋಕ್ ರಾಜ್ ನಾರಾಯಣ್ ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಿಶ್ರಾ ಅವರು ಈ ವರ್ಷದ ಜನವರಿಯಲ್ಲಿ ಆರ್ಯ ಸಮಾಜ ಸಮಾರಂಭ ಮತ್ತು ನ್ಯಾಯಾಲಯದ ನೋಂದಣಿ ಮೂಲಕ ಬರೇಲಿಯ ಸರ್ಕಾರಿ ಶಾಲೆಯ ಪ್ರಾಂಶುಪಾಲ ಅಭಿನವ್ ಕಟಿಯಾರ್ ಅವರನ್ನು ವಿವಾಹವಾಗಿದ್ದರು.
ಯುವತಿ, ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಲು ತನ್ನ ಪೋಷಕರ ಮನೆಯಲ್ಲಿಯೇ ಇದ್ದಳು.
ವಿಚಾರಣೆಯ ಸಮಯದಲ್ಲಿ, ಆಕೆಯ ಸಹೋದರ ಅಶುತೋಷ್ ಮಿಶ್ರಾ, ದೇಶೀಯ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಅಪರಾಧದಲ್ಲಿ ಪಿತೂರಿ ನಡೆಸಿದ ಆರೋಪದ ಮೇಲೆ ಆಕೆಯ ತಾಯಿಯನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement