
ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳಿಂದ ಹಲ್ಲೆ, ಕೊಲೆಯಂತಹ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ರೀತಿಯಲ್ಲಿ ಮೀರತ್ ನಲ್ಲಿ ಪ್ರಿಯಕರನ ಜೊತೆಗೆ ಸೇರಿದ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದ ವಿಷಯ ತಿಳಿದ ನಂತರ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಕೈ ತೊಳೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಧಾಂಗ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಕಟಾರ್ ಮಿಶ್ರಾ ಗ್ರಾಮದ ಬಬ್ಲು ಎಂಬಾತ ತನ್ನ ಪತ್ನಿ ರಾಧಿಕಾಳನ್ನು ಆಕೆಯ ಲವರ್ ವಿಶಾಲ್ ಕುಮಾರ್ ಜೊತೆಗೆ ಮದುವೆ ಮಾಡಿಸಿದ್ದಾರೆ.
ಬೇರೆ ರಾಜ್ಯದಲ್ಲಿ ಕೂಲಿ ಕೆಲಸ ಮಾಡುವ ಬಬ್ಲು 2017 ರಲ್ಲಿ ಮೂಲತಃ ಗೋರಖ್‌ಪುರ ಜಿಲ್ಲೆಯ ರಾಧಿಕಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ರಾಧಿಕಾ ಕಳೆದ ಒಂದೂವರೆ ವರ್ಷದಿಂದ ಅದೇ ಗ್ರಾಮದ ವಿಶಾಲ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು ಎಂದು ಸ್ಥಳೀಯರು ಹೇಳುತ್ತಾರೆ.
ಬಬ್ಲುವಿಗೆ ಈ ಸಂಬಂಧ ಗೊತ್ತಾಗಿದ್ದು, ಅದನ್ನು ಕೊನೆಗೊಳಿಸುವಂತೆ ರಾಧಿಕಾಳಿಗೆ ಎಷ್ಟೇ ಹೇಳಿದರೂ ಆಕೆ ಸಂಬಂಧ ಮುಂದುವರೆಸಿದ್ದಾಳೆ. ಇದರಿಂದ ಆಗಾಗ್ಗೆ ಇಬ್ಬರ ಜಗಳ ಉಂಟಾಗುತ್ತಿದ್ದರಿಂದ ಕೊನೆಗೆ ಅವರಿಬ್ಬರ ಮದುವೆ ಮಾಡಿಸಲು ಬಬ್ಲು ನಿರ್ಧರಿಸಿದ್ದಾನೆ.
ಸೋಮವಾರ ಧಾಂಗ್ಟಾ ತೆಹಸೀಲ್ ನಲ್ಲಿ ರಾಧಿಕಾ ಮತ್ತು ವಿಶಾಲ್ ಮದುವೆಗೆ ಒಪ್ಪಿಕೊಂಡಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ವಿಶಾಲ್ ಜೊತೆಗೆ ಸಂಬಂಧ ಕಡಿತಗೊಳಿಸುವಂತೆ ಪದೇ ಪದೇ ಹೇಳಿದ್ದರೂ ರಾಧಿಕಾ ನಿರಾಕರಿಸುತ್ತಿದ್ದಳು. ಹೀಗಾಗಿ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಅವರ ಮದುವೆ ಮಾಡಿಸಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ ಗಂಡಂದಿರನ್ನು ಅವರ ಹೆಂಡತಿಯರು ಕೊಲ್ಲುವುದನ್ನು ನಾವು ನೋಡಿದ್ದೇವೆ" ಎಂದು ಬಬ್ಲು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ವಾರ ಮೀರತ್ ನಲ್ಲಿ ನಡೆದ ಘಟನೆ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಮುಸ್ಕನ್ ತನ್ನ ಲವರ್ ಸಹೀಲ್ ಜೊತೆಗೆ ಸೇರಿಕೊಂಡು ಪತಿ ಸೌರಬ್ ನನ್ನು ಹತ್ಯೆ ಮಾಡಿ ನೀರಿನ ಡ್ರಮ್ ಒಳಗಡೆ ಮೃತದೇಹವನ್ನು ಇಟ್ಟಿದ್ದ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿತು. ಹೀಗಾಗಿ ಮುಂದೆ ಅಂತಹ ಸಂದರ್ಭ ಬರದಿರಲಿ ಎಂದು ತನ್ನ ಪತ್ನಿಯನ್ನು ಮದುವೆ ಮಾಡಿಸಲು ನಿರ್ಧರಿಸಿದ್ದಾಗಿ ಬಬ್ಬು ಹೇಳಿಕೊಂಡಿದ್ದಾರೆ.
Advertisement