
ನವದೆಹಲಿ: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ "Brahmins" ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೂ ಇತ್ತೀಚಿನ ಹೇಳಿಕೆಯನ್ನು ಭಾರತ ಬಲವಾಗಿ ತಿರಸ್ಕರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ವಕ್ತಾರ ರಣಧೀರ್ ಜೈಸ್ವಾಲ್, ಸೂಕ್ತವಲ್ಲದ, ಹಾದಿತಪ್ಪಿಸುವ ಹೇಳಿಕೆಯನ್ನು ಪೀಟರ್ ನವರೂ ನೀಡಿದ್ದಾರೆ. ಖಂಡಿತವಾಗಿಯೂ ನಾವು ಅದನ್ನು ತಿರಸ್ಕರಿಸುತ್ತೇವೆ ಎಂದರು.
ಫಾಕ್ಸ್ ನ್ಯೂಸ್‌ಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪೀಟರ್ ನವರೂ ಬ್ರಾಹ್ಮಣರು" ಭಾರತೀಯ ಜನರ ವೆಚ್ಚದಲ್ಲಿ ಲಾಭ ಗಳಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರತದ ಮೇಲೆ ಟ್ರಂಪ್ ಅವರ ಶೇ. 50 ರಷ್ಟು ಸುಂಕ ನೀತಿಯನ್ನು ಸಮರ್ಥಿಸಿಕೊಂಡಿದ್ದರು.
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಮುಖವಾದದ್ದು ಎಂದು ಹೇಳಿದ ಜೈಸ್ವಾಲ್, ಉಭಯ ದೇಶಗಳು ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಂದಿವೆ ಎಂದು ವಿವರಿಸಿದರು.
ಅಮೆರಿಕ ಮತ್ತು ಭಾರತದ ನಡುವಿನ ಈ ಸಂಬಂಧ ನಮಗೆ ಬಹಳ ಮುಖ್ಯವಾಗಿದೆ. ಉಭಯ ದೇಶಗಳು ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ. ಇದು ನಮ್ಮ ಒಪ್ಪಿತ ಹಿತಾಸಕ್ತಿಗಳು, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ದೃಢವಾದ ಜನರ-ಜನರ ನಡುವಿನ ಸಂಬಂಧಗಳಲ್ಲಿ ಆಧಾರವಾಗಿದೆ ಎಂದು ಜೈಸ್ವಾಲ್ ಹೇಳಿದರು.
ಬಹು ಸವಾಲುಗಳು ಮತ್ತು ಸ್ಥಿತ್ಯಂತರಗಳನ್ನು ಪಾಲುದಾರಿಕೆ ಸಹಿಸಿಕೊಂಡಿದ್ದು, ಎರಡೂ ದೇಶಗಳು ದ್ವಿಪಕ್ಷೀಯ ಕಾರ್ಯಸೂಚಿಯನ್ನು ಮುಂದುವರಿಸುವತ್ತ ಗಮನಹರಿಸಿವೆ. "ಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿ ಆಧಾರದ ಮೇಲೆ ಸಂಬಂಧ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ. ಅಲಾಸ್ಕಾದಲ್ಲಿ ಭಾರತ- ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ ನಡೆಯುತ್ತಿದೆ. ಕೆಲ ದಿನಗಳ ಎರಡು ರಾಷ್ಟ್ರಗಳ ಉನ್ನತ ಅಧಿಕಾರಿಗಳ ಸಭೆ ನಡೆದಿತ್ತು ಎಂದು ಅವರು ಹೇಳಿದರು.
Advertisement