ಒಂದೂರಿನಲ್ಲಿ ಬಡ ಬ್ರಾಹ್ಮಣನಿದ್ದ ಎಂದೇ ಶುರುವಾಗುತ್ತಿದ್ದ ಕತೆಯನ್ನು ಬದಲಿಸುತ್ತಿರುವವರ್ಯಾರು? (ತೆರೆದ ಕಿಟಕಿ)

ತಮ್ಮ ಬಾಣ ನಾಟಬೇಕಾದಲ್ಲಿ ನಾಟಿಲ್ಲ ಹಾಗೂ ಎಲ್ಲರೂ ತಮ್ಮ ತಿಳಿವಳಿಕೆಯನ್ನೇ ಗೇಲಿ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಲೇ ಅಮೆರಿಕದ ಅಧಿಕಾರಸ್ಥರಿಂದ ಲಾಭ ಪಡೆದುಕೊಂಡಿರುವ ಬುದ್ಧಿಜೀವಿ ವರ್ಗವೊಂದು ಹೊಸ ರಾಗ ಹಾಡಿದ್ದೂ ಆಯ್ತು.
Brahmins Row
ಮೋದಿ-ಟ್ರಂಪ್ANI
Updated on

ರಷ್ಯಾದ ಜತೆ ಭಾರತದ ವ್ಯವಹಾರದಿಂದ ಭಾರತದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಮೆರಿಕದ ಅಧಿಕಾರಸ್ಥನೊಬ್ಬನ ಹೇಳಿಕೆ ನಮ್ಮಲ್ಲಿ ಸಾಕಷ್ಟು ತಮಾಷೆ -ಜೋಕುಗಳಿಗೆ ಕಾರಣವಾಗಿದೆ.

ತಮ್ಮ ಬಾಣ ನಾಟಬೇಕಾದಲ್ಲಿ ನಾಟಿಲ್ಲ ಹಾಗೂ ಎಲ್ಲರೂ ತಮ್ಮ ತಿಳಿವಳಿಕೆಯನ್ನೇ ಗೇಲಿ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಲೇ ಅಮೆರಿಕದ ಅಧಿಕಾರಸ್ಥರಿಂದ ಲಾಭ ಪಡೆದುಕೊಂಡಿರುವ ಬುದ್ಧಿಜೀವಿ ವರ್ಗವೊಂದು ಹೊಸ ರಾಗ ಹಾಡಿದ್ದೂ ಆಯ್ತು. “ಅವರು ಹೇಳಿದ್ದು ಬ್ರಾಹ್ಮಣ ಜಾತಿಯನ್ನು ಉಲ್ಲೇಖಿಸಿ ಅಲ್ಲ ಕಣ್ರೀ.. ಶ್ರೀಮಂತ ವರ್ಗ ಲಾಭ ಮಾಡಿಕೊಳ್ತಿದೆ ಎಂಬರ್ಥದಲ್ಲಿ.

ಅಮೆರಿಕದಲ್ಲಿ ಈ ರೀತಿಯ ಮೇಲ್ವರ್ಗಕ್ಕೆ ಬಾಸ್ಟನ್ ಬ್ರಾಹ್ಮಿನ್ಸ್ ಅಂತ ಕರೀತಾರೆ. ಆ ಹಿನ್ನೆಲೆಯಲ್ಲಿ ಹೇಳಿದ್ದು…” ಅಂತೆಲ್ಲ ತಿಪ್ಪೆ ಸಾರಿಸುವ ಕೆಲಸವೂ ಆಯ್ತು.

ಅದೇನೇ ಇರಲಿ…ಇಂಥ ವರಸೆಗಳು ಭಾರತದ ಬುದ್ಧಿಜೀವಿ ವರ್ಗಕ್ಕೂ ಹೊಸತೇನಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಮನುಸ್ಮೃತಿ ಮತ್ತು ಬ್ರಾಹ್ಮಣರೇ ಕಾರಣ ಎಂದು ವಾಚಾಮಗೋಚರ ಬಯ್ದುಕೊಂಡು, ಗೇಲಿ ಮಾಡಿಕೊಂಡಿರುವುದು.

ಇದನ್ನು ಯಾರಾದರೂ ತುಂಬ ತರ್ಕಬದ್ಧವಾಗಿ ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಹೋದಾಗ, “ನಾವು ಬ್ರಾಹ್ಮಣ ವಿರೋಧಿಗಳಲ್ಲ, ಬ್ರಾಹ್ಮಣ್ಯದ ವಿರೋಧಿಗಳು”, “ನಾವು ಬ್ರಾಹ್ಮಣವಾದವನ್ನು ಟೀಕಿಸುತ್ತೇವೆಂದರೆ ಅದರರ್ಥ ಎಲ್ಲ ಜಾತಿಗಳಲ್ಲಿರುವ ಮೇಲ್ವರ್ಗದ ಧೋರಣೆ ಟೀಕಿಸುತ್ತಿದ್ದೇವೆ ಅಂತ ಅರ್ಥ” ಎಂದೆಲ್ಲ “ವೈಶಾಲ್ಯ” ಮೆರೆಯುವ “ವಿಚಾರವಾದಿ”ಗಳಿಗೆ ನಮ್ಮಲ್ಲೂ ಬರವೇನಿಲ್ಲ.

ಒಟ್ಟಿನಲ್ಲಿ ವರ್ಗ ಸಂಘರ್ಷ, ಜಾತಿ ಸಂಘರ್ಷ, ಅಸಮಾನತೆ ಇಂಥವಕ್ಕೆಲ್ಲ ಬ್ರಾಹ್ಮಣ ಎಂಬ ಪದವನ್ನು ಸಂವಾದಿಯಾಗಿ ಬಳಸಬಹುದು ಎಂಬುದು ಜಾಗತಿಕಮಟ್ಟದಲ್ಲಿ ವಿಚಾರವಾದಿಗಳು ಎಂದು ಗುರುತಿಸಿಕೊಳ್ಳುವ ವರ್ಗ ವ್ಯಾಖ್ಯಾನ ನಿರ್ಮಿಸಿಬಿಟ್ಟಿದೆ. ಈ ಬಗ್ಗೆ ಆಕ್ರೋಶಗೊಳ್ಳಬೇಕಾದ, ಆತಂಕಪಟ್ಟುಕೊಳ್ಳಬೇಕಾದ ಅಗತ್ಯವೇನಿಲ್ಲವಾದರೂ ಈ ಎಲ್ಲ ಧಾರಣೆಗಳ ಬೇರುಗಳನ್ನು ತಡವುತ್ತ ಹೋದರೆ ಕೌತುಕದ ಸಂಗತಿಗಳು ಬಿಚ್ಚಿಕೊಳ್ಳುತ್ತವೆ.

Brahmins Row
ಸಮರದಷ್ಟೇ ಸ್ಟ್ರಾಟಜಿ ಬೇಡುತ್ತದೆ ಚೀನಾದ ಜತೆಗಿನ ಸ್ನೇಹ (ತೆರೆದ ಕಿಟಕಿ)

ಅಲೆಕ್ಸಾಂಡರ್ ಬ್ರಾಹ್ಮಣರನ್ನೇಕೆ ಕೊಲ್ಲಿಸಿದ?

ರಾವಿ ನದಿ ಹತ್ತಿರ ಬರುವಷ್ಟರಲ್ಲಿ ಸುಸ್ತುಬಡಿದು ಹಿಂತಿರುಗಿದ ಅಲೆಕ್ಸಾಂಡರ್ ಭಾರತದ ಪಾಲಿಗೇನೂ ಗ್ರೇಟ್ ಅಲ್ಲ. ಆದರೆ, ಈ ಹಂತದಲ್ಲಿ ಹಲವು ತಿಂಗಳುಗಳವರೆಗೆ ಆತ ಸೈನ್ಯದೊಂದಿಗೆ ಭಾರತದ ವಾಯವ್ಯ ಭಾಗಗಳಲ್ಲಿ ಬೀಡುಬಿಟ್ಟಿದ್ದನಲ್ಲ. ಎಷ್ಟೆಂದರೂ ತತ್ತ್ವಜ್ಞಾನಿಗಳ ನೆಲದಿಂದ ಬಂದವನಲ್ಲವೇ? ಹೀಗಾಗಿ, ಅವತ್ತಿಗೆ ಭಾರತದ ಶಾಸ್ತ್ರಗಳಲ್ಲಿ ವಿದ್ವತ್ ಹೊಂದಿದ್ದ ಬ್ರಾಹ್ಮಣ ವರ್ಗದ ಜನರನ್ನು ಆತ ಚರ್ಚೆಗೆ ಆಹ್ವಾನಿಸುತ್ತಿದ್ದ. ಹಾಗೆಂದು ಗ್ರೀಕ್ ಚರಿತ್ರೆಯೇ ದಾಖಲಿಸುತ್ತದೆ. ಇಂತಿಪ್ಪ ಅಲೆಕ್ಸಾಂಡರ್ ಕೆಲವು ಪಟ್ಟಣಗಳಲ್ಲಿ ಬ್ರಾಹ್ಮಣರನ್ನು ಕೊಲ್ಲಿಸಿದ್ದಾಗಿಯೂ ಪ್ಲುಟಾರ್ಕ್ ಇತ್ಯಾದಿ ಮಂದಿಯ ಬರಹಗಳು ಉಲ್ಲೇಖಿಸುತ್ತವೆ. ಏಕೆ ಹೀಗೆ?

ಏಕೆಂದರೆ, ಅವತ್ತಿಗೆ ತಮ್ಮನ್ನು ಅಲೆಕ್ಸಾಂಡರ್ ಕರೆಸಿಕೊಂಡು ಚರ್ಚಿಸಿದ ಎಂದು ಹಿಗ್ಗಿದ್ದ ಬ್ರಾಹ್ಮಣರ ಸಂಖ್ಯೆ ಕಡಿಮೆ ಇತ್ತು. ಹಲವು ಬುಡಕಟ್ಟುಗಳು ಹಾಗೂ ಜನಪದಗಳಲ್ಲಿ ಆಡಳಿತ ಹಂಚಿಕೊಂಡಿದ್ದೇ ಪ್ರಾರಂಭಿಕವಾಗಿ ಅಲೆಕ್ಸಾಂಡರ್ ದಾಳಿಯನ್ನು ಎದುರಿಸುವಲ್ಲಿ ವೈಫಲ್ಯಕ್ಕೆ ಕಾರಣವಷ್ಟೆ. ಹೀಗೆ ಅಲೆಕ್ಸಾಂಡರ್ ತನ್ನ ಅಧೀನಕ್ಕೆ ಪಡೆದುಕೊಂಡಿದ್ದ ಜಾಗಗಳಲ್ಲಿ ಸಂಚರಿಸುತ್ತಿದ್ದ ಬ್ರಾಹ್ಮಣರು ಅಲ್ಲಿನ ಕ್ಷಾತ್ರಪ್ರಜ್ಞೆಯನ್ನು ಜಾಗೃತಗೊಳಿಸುತ್ತ ಸಾಗಿದ್ದರು. ನಮ್ಮ ಭೂಭಾಗವನ್ನು ಇನ್ಯಾರೋ ಆಕ್ರಮಿಸಿಕೊಂಡಿದ್ದರೆ, ಅವರಡಿಗೆ ಊಳಿಗ ಮಾಡಲು ಹೊರಟಿದ್ದೀರಲ್ಲ, ಸಿಡಿದೇಳಿ ಎಂದು ಬಂಡಾಯದ ಕಿಚ್ಚು ಹಚ್ಚಿಸುತ್ತಿದ್ದರು. ಇದೇ ಕಾರಣಕ್ಕಾಗಿ ಅಲೆಕ್ಸಾಂಡರ್ ಹಲವು ಬ್ರಾಹ್ಮಣರನ್ನು ಕೊಲ್ಲಿಸಿದ.

ಗ್ರೀಕರು ಬಂದಾಗಲೂ, ಹಲವು ಶತಮಾನಗಳ ನಂತರ ಸಿಂಧ್ ಪ್ರಾಂತ್ಯಕ್ಕೆ ಇಸ್ಲಾಂ ಆಕ್ರಮಣಕಾರರು ಬಂದಾಗಲೂ ಅದರಿಂದ ತಮಗೇನೂ ನಷ್ಟವಿಲ್ಲ ಎಂದು ಅವತ್ತಿಗೆ ಸಾಮಾಜಿಕ ಜೀವನದಲ್ಲಿ ಪ್ರಾಬಲ್ಯ ಹೊಂದಿದ್ದ ಇನ್ನೊಂದು ವರ್ಗ ನಡೆದುಕೊಂಡಿತ್ತು ಎಂಬುದಕ್ಕೂ ಢಾಳಾದ ಐತಿಹಾಸಿಕ ಆಧಾರಗಳಿವೆ. ಅವರೆಂದರೆ ಬೌದ್ಧರು. ಯವನರನ್ನು (ಗ್ರೀಕ್) ಬ್ರಾಹ್ಮಣ ಸಾಹಿತ್ಯವು ಮ್ಲೇಚ್ಛರು ಅರ್ಥಾತ್ ಹೊರಗಿನವರೆಂದು ಗುರುತಿಸಿದರೆ, ಬೌದ್ಧ ಸಂಪ್ರದಾಯ ಅವರನ್ನು ತಮ್ಮ ಮತದ ಪ್ರೋತ್ಸಾಹಕರೆಂದೇ ಗೌರವಿಸಿತು. ಹಲವು ಸ್ತೂಪಗಳು ಯವನರಿಂದ ಅನುದಾನವನ್ನೂ ಪಡೆದವು.

ಇವುಗಳಲ್ಲಿ ಸರಿ-ತಪ್ಪುಗಳ ಆರೋಪ ಪ್ರತ್ಯಾರೋಪಗಳಿಗೆಳೆಸುವುದು ಈ ಲೇಖನದ ಉದ್ದೇಶವಲ್ಲ. ಏಕೆಂದರೆ, ಭಾರತದ ಹಲವು ಭೂಭಾಗಗಳನ್ನು ಕೆಲ ಸಮಯಗಳಿಗೆ ಆಳಿದ ಗ್ರೀಕ್, ಸಕ, ಕುಶಾನರ್ಯಾರೂ ಭಾರತೀಯ ಸಂಸ್ಕೃತಿ ಪ್ರವಾಹಕ್ಕೆ ಹಾನಿ ಎಸಗಲಿಲ್ಲ. ದೀರ್ಘಾವಧಿಯಲ್ಲಿ ಅವರು ಸನಾತನ ಧಾರೆಯೊಂದಿಗೆ ಬೆರೆತು ತಮ್ಮ ಅಸ್ತಿತ್ವವನ್ನೇ ಮರೆತುಬಿಟ್ಟರು. ಅದಿರಲಿ… ಆದರೆ, ರಾಷ್ಟ್ರವಾದಕ್ಕೆ ಬದ್ಧವಾಗಿದ್ದ ಒಂದು ವರ್ಗ ಅವತ್ತಿಗೆ ಅದಕ್ಕಾಗಿ ಪ್ರಾಣ ತೆತ್ತಿತ್ತು ಎಂಬುದೂ ಮುಖ್ಯವೇ.

Brahmins Row
ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)

ಇಷ್ಟಕ್ಕೂ ಲಾಭ ಮಾಡಿಕೊಂಡವರು ಯಾರು?

“ಪ್ರಾಚೀನ ಭಾರತದ ರಾಜಪ್ರಭುತ್ವಗಳ ಸಂದರ್ಭದಲ್ಲಾಗಲೀ, ನಂತರದ ಬ್ರಿಟಿಷ್ ಆಡಳಿತದಲ್ಲಾಗಲೀ ನೀತಿ-ನಿರೂಪಣೆಗಳ ಸ್ಥಾನದಲ್ಲಿ ಬ್ರಾಹ್ಮಣರಿದ್ದರು. ಯಜ್ಞ-ಯಾಗ ಮಾಡಿಸಿ ತಮಗೆ ಲಾಭವಾಗುವಂತೆ ಮಾಡಿಕೊಳ್ಳುತ್ತಿದ್ದರು” ಎಂಬ ಧಾಟಿಯ ಕಥಾನಕವೊಂದನ್ನು ನಮ್ಮಲ್ಲೂ ಬುದ್ಧಿಜೀವಿಗಳು ಲಾಗಾಯ್ತಿನಿಂದ ಜಾರಿಯಲ್ಲಿರಿಸಿದ್ದಾರೆ.

ಹೋಮ ಮಾಡುವುದು, ದೇವಸ್ಥಾನ ನಿರ್ವಹಿಸುವುದು ಇವಷ್ಟೇ ಪ್ರಾಚೀನ ಭಾರತದ ಉದ್ಯಮಗಳಾಗಿದ್ದವು ಎಂಬ ಕಲ್ಪನೆ ಕಟ್ಟಿಕೊಡುತ್ತವೆ ಇಂಥ ವಾದಗಳು. ವಾಸ್ತವದಲ್ಲಿ, ಭಾರತದ ಹೆಚ್ಚುಗಾರಿಕೆ ಇದ್ದದ್ದು ವ್ಯಾಪಾರದಲ್ಲಿ. ಅದರಲ್ಲೂ ಸಮುದ್ರ ವ್ಯಾಪಾರ ಉನ್ನತಮಟ್ಟದಲ್ಲಿತ್ತು. ಈ ವ್ಯಾಪಾರ ಪ್ರಪಂಚದ ಲಾಭವನ್ನು ಒಂದು ದೀರ್ಘ ಅವಧಿಗೆ ತಮ್ಮದಾಗಿಸಿಕೊಂಡವರು ಹಾಗೂ ಇದರ ಮೇಲೆ ಹಿಡಿತ ಹೊಂದಿದ್ದವರು ಯಾರಾಗಿದ್ದರು? ಬೌದ್ಧ ಸಂಘಗಳು!

ದೇಶದ ಕರಕುಶಲಿಗರ ಒಕ್ಕೂಟಗಳು, ವ್ಯಾಪಾರಿ ಒಕ್ಕೂಟಗಳು ಇವೆಲ್ಲ ಬೌದ್ಧಸಂಘಗಳಲ್ಲಿ ತಮ್ಮ ಹಣ ಜಮೆಯಾಗಿಸುತ್ತಿದ್ದವು. ಈ ಪೈಕಿ ಕೆಲವು ದಾನಗಳೂ ಇದ್ದವು. ಈ ಹಣವನ್ನು ಅಗತ್ಯವಿರುವ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ಸಂಘವು ಬಡ್ಡಿಯನ್ನು ದುಡಿಯುತ್ತಿತ್ತು. ದೇಶಾದ್ಯಂತ ಹರಡಿಕೊಂಡಿದ್ದ ಬೌದ್ಧ ವಿಹಾರಗಳು ವ್ಯಾಪಾರಿಗಳಿಗೆ ತಮ್ಮ ಸಂಚಾರ ಸಮಯದಲ್ಲಿ ತಮ್ಮ ಸಾಗಣೆ ಸಾರೋಟುಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುವ ಕೇಂದ್ರಗಳೂ ಆಗಿದ್ದವು.

ಹಾಗೆಂದೇ ಅವತ್ತಿನ ವ್ಯಾಪಾರ ಮಾರ್ಗಗಳ ಜತೆ ಜತೆಯಲ್ಲಿ ಬೌದ್ಧಮತವೂ ಚೀನಾ ಸೇರಿದಂತೆ ಹಲವು ಭೂಭಾಗಗಳಿಗೆ ಪಸರಿಸಿಕೊಂಡಿತು. ಬೌದ್ಧಸಂಘಗಳು ವ್ಯಾಪಾರದ ಜತೆ ಬೆರೆತುಕೊಂಡಿದ್ದವೆಂಬುದಕ್ಕೆ ನಾಸಿಕ್, ಕಾರ್ಲೆ ಸೇರಿದಂತೆ ಶಾಸನಾಧಾರಗಳು ಹಾಗೂ ಬೌದ್ಧಸಾಹಿತ್ಯದಲ್ಲೇ ಈ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಇತಿಹಾಸಕಾರ ವಿಲಿಯಂ ಡ್ಯಾಲ್ರಿಂಪಲ್ ಅವರ ಇತ್ತೀಚಿನ ಪುಸ್ತಕ “ದ ಗೋಲ್ಡನ್ ರೋಡ್” ಈ ನಿಟ್ಟಿನಲ್ಲಿ ಸಾಕಷ್ಟು ಬೆಳಕು ಚೆಲ್ಲಿದೆ.

Brahmins Row
ಬದುಕು ಅರಳಿಸಿಕೊಳ್ಳುವ ಸಂಭ್ರಮಕ್ಕಿಂತ ಆತ್ಮಹತ್ಯೆಯೇ ಆಹ್ಲಾದವೆನಿಸುತ್ತಿರುವುದೇಕೆ? (ತೆರೆದ ಕಿಟಕಿ)

ಇಂಗ್ಲಿಷ್ ಯುಗದಲ್ಲಿ ಬ್ರಾಹ್ಮಣರು

ಬ್ರಿಟಿಷರು ಭಾರತದಲ್ಲಿ ಆಡಳಿತ ಪ್ರಾರಂಭಿಸಿದಾಗ ಇಂಗ್ಲಿಷ್ ಕಲಿತು ನೌಕರಿ ಹಿಡಿದವರಲ್ಲಿ ಹೆಚ್ಚಿನವರು ಬ್ರಾಹ್ಮಣರಲ್ಲವೇ? ಮುಂದೆ ಇದೇ ಇಂಗ್ಲಿಷ್ ಜಗತ್ತಿನ ಭಾಗವಾದ ಸಾಫ್ಟ್ವೇರ್ ಸೇರಿದಂತೆ ಹಲವು ಬಗೆಯ ಹೊರಗುತ್ತಿಗೆ ಉದ್ಯೋಗಪರ್ವದ ಮುಂಚೂಣಿ ಫಲಾನುಭವಿಗಳು ಬ್ರಾಹ್ಮಣರಲ್ಲವೇ? ಇಲ್ಲೆಲ್ಲ ಅವರು ಇಂಗ್ಲಿಷ್ ಸಾಮ್ರಾಜ್ಯ ಕಟ್ಟುವಿಕೆಗೆ ಪರೋಕ್ಷ ನೆರವಿತ್ತರಲ್ಲವೇ? ಈ ಎಲ್ಲ ಪ್ರಶ್ನೆಗಳಿಗೂ ಹೌದೆಂಬುದೇ ಮೇಲ್ನೋಟದ ಉತ್ತರ. ಆದರೆ, ಅಲ್ಲಿ ಮತ್ತೊಂದು ಆಯಾಮ ಹೀಗೆ ತೆರೆದುಕೊಳ್ಳುತ್ತದೆ.

1877ರಲ್ಲಿ ವಿಶೇಷವಾಗಿ ಮಹಾರಾಷ್ಟ್ರ ಭಾಗವನ್ನು ಕಾಡಿದ್ದ ಬರ ಹಾಗೂ ಬ್ರಿಟಿಷ್ ಆಡಳಿತ ಜನರನ್ನು ನಿರ್ಲಕ್ಷಿಸಿದ್ದ ರೀತಿ ದೊಡ್ಡ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೊಂದು ರೂಪ ಕೊಡುವ ಕೆಲಸಕ್ಕೆ ಮುಂದೆ ಬಂದ ವ್ಯಕ್ತಿಯ ಹೆಸರು ವಾಸುದೇವ ಬಲವಂತ ಫಡ್ಕೆ. ಆತ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಗುಜರಾಯಿಸುತ್ತ ಕೂರಲಿಲ್ಲ. ಒಂದು ದೊಡ್ಡ ಬಂಡುಕೋರ ಗುಂಪನ್ನು ಸಂಘಟಿಸಿ ಕೊಂಕಣ ಪ್ರಾಂತ್ಯದಲ್ಲಿ ಅವತ್ತಿನ ಸರ್ಕಾರಿ ಸಂಪನ್ಮೂಲ ದರೋಡೆ ಮಾಡಿ ಶಸ್ತ್ರಾಸ್ತ್ರ ಖರೀದಿ ಮೂಲಕ ಪರ್ಯಾಯ ಶಕ್ತಿಯೊಂದನ್ನು ನಿಲ್ಲಿಸತೊಡಗಿದ.

ಬ್ರಿಟಿಷ್ ಸರ್ಕಾರ ಈತನ ತಲೆಗೆ ಬಹುಮಾನ ಘೋಷಿಸಿದರೆ, ವಾಸುದೇವ ಬಲವಂತ ಫಡ್ಕೆ ಅದಕ್ಕೆ ದುಪ್ಪಟ್ಟು ಬಹುಮಾನವನ್ನು ಮುಂಬೈ ಬ್ರಿಟಿಷ್ ಗವರ್ನರನ ತಲೆ ತಂದುಕೊಡುವವರಿಗೆ ನೀಡುವುದಾಗಿ ಪೂಣಾದ ಗೋಡೆಗಳ ಮೇಲೆ ಚೀಟಿಗಳನ್ನು ಅಂಟಿಸಿ ಘೋಷಿಸಿದ! ತನ್ನ ಸರ್ವಶಕ್ತಿ ಉಪಯೋಗಿಸಿ ಈತನನ್ನು 1879ರಲ್ಲಿ ಬ್ರಿಟಿಷ್ ಆಡಳಿತವು ಸೆರೆಯಾಗಿಸಿ, ಏಡನ್ ಎಂಬ ಭಾರತದಾಚೆಗಿನ ಪ್ರದೇಶಕ್ಕೆ ಕಳುಹಿಸಿದರೆ, ಈತ ಅಲ್ಲಿನ ಜೈಲಿನಿಂದಲೇ ಪರಾರಿಯಾಗಿ ಪರಾಕ್ರಮ ಮೆರೆದಿದ್ದ. ಮತ್ತೆ ಆತನನ್ನು ಬಂಧಿಸಿ, ಹಿಂಸೆಗೊಳಪಡಿಸಿ, 1883ರ ಹೊತ್ತಿಗೆ ಹಸಿವಿನಿಂದಲೇ ಜೈಲಿನಲ್ಲಿ ಸಾಯುವಂತೆ ಬ್ರಿಟಿಷರು ಮಾಡಿದರು.

ಆದರೆ ಫಡ್ಕೆ ಹೊತ್ತಿಸಿದ್ದ ಕಿಡಿ ವಿಶಿಷ್ಟವಾಗಿ ಪಸರಿಸಿದ್ದನ್ನು ಬ್ರಿಟಿಷರು ಗಮನಿಸಿದರು. ಏಕೆಂದರೆ, ಬ್ರಾಹ್ಮಣನಾಗಿದ್ದ ಫಡ್ಕೆ ಅದೆಷ್ಟು ವಿಶಾಲ ಕ್ರಾಂತಿಕಾರಿ ಜಾಲವನ್ನು ಸೃಷ್ಟಿಸಿಬಿಟ್ಟಿದ್ದ ಎಂದರೆ, ಮಹರ್, ರಾಮೊಶಿ, ಕೊಲಿ ಜನಾಂಗದವರು ಹಾಗೂ ಈಗಿನ ಕರ್ನಾಟಕದ ಪ್ರಾತ್ಯಗಳ ಲಿಂಗಾಯತರು, ಹೈದರಾಬಾದ್ ನಿಜಾಮನ ಪಡೆಯಲ್ಲಿದ್ದ ಮುಸ್ಲಿಂ ಮತ್ತು ಸಿಖ್ ಯೋಧರೆಲ್ಲ ಫಡ್ಕೆ ಜಾಲದಲ್ಲಿ ಬೆಸೆದುಕೊಂಡಿದ್ದರು! ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವೆ ಕಂದಕವನ್ನು ಸೃಷ್ಟಿಸಲೇಬೇಕೆಂದು ಬ್ರಿಟಿಷರಿಗೆ ಪ್ರಬಲವಾಗಿ ಅನ್ನಿಸಿದ್ದು ಅಲ್ಲಿಂದ. ಅದಕ್ಕೂ ಮೊದಲು ಮಂಗಲ ಪಾಂಡೆ ರೂಪದಲ್ಲೂ ಉದಾಹರಣೆ ಒಂದಿತ್ತಾದರೂ ಅದೇನೋ ಆಕಸ್ಮಿಕ ಎಂಬಂತಹ ಗ್ರಹಿಕೆ ಇತ್ತು.

ಹಾಗೆಂದೇ, ತಮ್ಮ ಗುಮಾಸ್ತಿಕೆ ಜಾಗಕ್ಕೆ ಬ್ರಾಹ್ಮಣರು ಒಕೆ, ಆದರೆ ಕ್ಷಾತ್ರದಿಂದ ಹಾಗೂ ಸಮಾಜ ಸಂಘಟನೆಯಿಂದ ಇವರನ್ನು ದೂರವಿರಿಸಬೇಕು ಎಂಬ ತೀರ್ಮಾನಕ್ಕೆ ಬ್ರಿಟಿಷರು ಬಂದರು. ಅದಕ್ಕೂ ಮೊದಲೇ ಜಾತಿಗಳಿದ್ದವಾದರೂ ಅವುಗಳ ಸ್ಥಾನಮಾನ ಬದಲಾವಣೆ ಸರಾಗವಾಗಿತ್ತು. ಬ್ರಿಟಿಷರು ಜಾತಿ ಗಣತಿ ಮೂಲಕ ಅವುಗಳಿಗೆ ಅಧಿಕೃತತೆ ತಂದು ಐಡೆಂಟಿಟಿ ಸ್ಥಾಪಿಸಿದರಲ್ಲದೇ, ಕೆಲವು ಜಾತಿಗಳನ್ನು ಮಾತ್ರ ಮಿಲಿಟರಿ ಪಂಗಡ ಎಂದು ಪರಿಗಣಿಸಿ ಸೇನೆಯಲ್ಲಿ ಅವರಿಗಷ್ಟೇ ಪ್ರಾತಿನಿಧ್ಯ ಕೊಡುವ ಕೆಲಸವಾಯಿತು. ಮನುಸ್ಮೃತಿ ಮುಂದಿಟ್ಟುಕೊಂಡು ಹಿಂದುಗಳಿಗೆ ಕಾನೂನು ಮಾಡಲು ಮುಂದಾದವರೂ ಬ್ರಿಟಿಷರೇ. 1916ರಲ್ಲಿ ಮದ್ರಾಸಿನಲ್ಲಿ ಬ್ರಾಹ್ಮಣ ವಿರೋಧಿ ಜಸ್ಟೀಸ್ ಪಾರ್ಟಿ ಪ್ರವರ್ಧಮಾನಕ್ಕೆ ಬರುವಲ್ಲಿದ್ದದ್ದೂ ಬ್ರಿಟಿಷ್ ಬೆಂಬಲವೇ. ಫಡ್ಕೆ, ಚಾಪೇಕರ್ ಸಹೋದರರು, ಸಾವರ್ಕರ್, ತಿಲಕರು…ಹೀಗೆ ಬ್ರಿಟಿಷರ ವಿರುದ್ಧ ತೀವ್ರತೆ ತೋರಿದವರ ಪಟ್ಟಿಯನ್ನು ಗಮನಿಸಿದರೆ ಬ್ರಾಹ್ಮಣರನ್ನು ನಿರ್ದಿಷ್ಟ ಜಾಗದಲ್ಲಿ ಮಾತ್ರವೇ ಇರಿಸುವ, ಶೋಷಣೆಗೆಲ್ಲ ಅವರೇ ಕಾರಣ ಎಂದು ವಸಾಹತುಕಾಲದ ವ್ಯಾಖ್ಯಾನ ನಿರ್ಮಿಸುವ ಆ ಕಾಲದ ಪ್ರಯತ್ನಗಳು ಹೆಚ್ಚು ಅರ್ಥವಾಗುತ್ತವೆ.

ಇವತ್ತಿನ ಪಾಶ್ಚಾತ್ಯ ಮನಸ್ಥಿತಿಯಲ್ಲೂ ಹೆಚ್ಚಿನ ಬದಲಾವಣೆ ಏನಿಲ್ಲ. ಡಾಲರ್ ಪಾರಮ್ಯದ ವ್ಯವಸ್ಥೆಯನ್ನು ಬಲಪಡಿಸುತ್ತ ಒಬ್ಬ ನೌಕರನಾಗಿ ದುಡಿಯುವಷ್ಟು ದಿನವೂ ಆ ಪಾತ್ರದಲ್ಲಿ ಬ್ರಾಹ್ಮಣ, ಅಲ್ಲದೇ ಯಾವುದೇ ಭಾರತೀಯ ಸ್ವೀಕಾರಾರ್ಹ ಹಾಗೂ ಸಹನಯೋಗ್ಯ. ಆ ವ್ಯವಸ್ಥೆಗೆ ಸವಾಲು ಎದುರಾದಾಗ ಅದರ ಆಕ್ರೋಶ ತಿರುಗಿಸುವುದಕ್ಕೂ ವಸ್ತುವಾಗಿ ಇವರೇ ಬೇಕು.

Brahmins Row
ಭಾರತದಾಚೆಗಿನ ಈ ದೇಶಗಳೇಕೆ ದೇವಾಲಯಕ್ಕಾಗಿ ಸಂಘರ್ಷ ನಡೆಸುತ್ತಿವೆ? (ತೆರೆದ ಕಿಟಕಿ)

ಹೀಗೊಂದು ನಂಬಿಕೆಯ ವಿಷಯ

ಈವರೆಗೆ ಬರೆದಿದ್ದೆಲ್ಲ ಇತಿಹಾಸಾಧಾರಿತ ಸಂಗತಿಗಳು. ಆದರೆ ಈ ಕೊನೆ ಭಾಗವನ್ನು ಕಣ್ಣಿಗೆ ಕಾಣುವ ತರ್ಕ ಜಗತ್ತಿನಾಚೆಗೆ ನಂಬಿಕೆಯ ನಾವೆಯಲ್ಲಿ ಪ್ರಯಣಿಸುವವರು ಮಾತ್ರವೇ ಅರ್ಥಮಾಡಿಕೊಳ್ಳಬಲ್ಲರು. ಅದೆಂದರೆ, ಏಕೆ ಬಡವ ಎಂಬ ಪದ ಬ್ರಾಹ್ಮಣದ ಜತೆ ಅಂಟಿಕೊಂಡಂತೆ ನಿಂತಿತು? ಕತೆಗಳಲ್ಲಿ ಬಡ ಬ್ರಾಹ್ಮಣ ಎಂಬ ಪದಪುಂಜ ಏಕೆ ದಟ್ಟವಾಗಿ ಹರಿದುಬಂತು? ಇದೂ ಬ್ರಾಹ್ಮಣರದ್ದೇ ಕುತಂತ್ರ, ಅವರೇ ಹಾಗೆ ಬರೆಸಿಕೊಂಡರು ಎಂದೆಲ್ಲ ಬುದ್ಧಿಜೀವಿಗಳು ವಾದಿಸಬಹುದೇನೋ.

ನಿಜ. ಯಜ್ಞ-ಯಾಗಗಳ ಅಧಿಕಾರ, ವೇದವನ್ನು ಇತರರಿಗೆ ಅಧ್ಯಾಪನ ಮಾಡುವ ಅವಕಾಶಗಳೆಲ್ಲ ಬ್ರಾಹ್ಮಣ ವರ್ಗಕ್ಕೇ ಇದ್ದದ್ದು ಹೌದು. ದಾನಗಳ ಉಲ್ಲೇಖ ಬಂದಾಗಲೆಲ್ಲ, ಅದು ಬಹುಮಟ್ಟಿಗೆ ಬ್ರಾಹ್ಮಣರಿಗೇ ಸೇರುತ್ತಿದ್ದ ವಿವರಣೆ ಇರುವುದೂ ಹೌದು. ಇಲ್ಲಿರುವ ನಂಬಿಕೆ ಮಿಶ್ರಿತ ತರ್ಕ ಏನೆಂದರೆ, ರಾಜನಿಗೋ ಇಲ್ಲವೇ ಉಳ್ಳ ಇನ್ಯಾರಿಗೋ ಯಜ್ಞಕಾರ್ಯಗಳನ್ನು ಮಾಡಿಕೊಡುವುದೇನೋ ಸರಿ. ಆದರೆ ಅದಕ್ಕೆ ತಕ್ಕನಾದ ಶಕ್ತಿಯನ್ನು ಬ್ರಾಹ್ಮಣ ಜಪ-ತಪಗಳಿಂದ ಗಳಿಸಿಕೊಳ್ಳಬೇಕು ಎನ್ನುವುದು.

ಹೀಗೆ ಜಪ-ತಪಗಳ ಮೂಲಕ ಶಕ್ತಿಸಂಚಯ ಎಂಬುದು ಸಾಧನೆ-ಕಠಿಣ ಶಿಸ್ತುಗಳ ಮಾರ್ಗ. ಹಾಗೆ ಶಕ್ತಿ ಗಳಿಸಿಕೊಳ್ಳದೇ ಕೇವಲ ಆಶೀರ್ವಾದ ಮಾಡಿಬಿಟ್ಟರೆ ಹಾಗೆ ಮಾಡಿದವರ ಸತ್ಕರ್ಮದ ಖಾತೆಯಿಂದಲೇ ಆ ಆಶೀರ್ವಾದದ ಶಕ್ತಿ ವ್ಯಯವಾಗುತ್ತದೆ ಎಂಬುದೊಂದು ಗ್ರಹಿಕೆ. ಅನುಷ್ಠಾನ ಉತ್ಕೃಷ್ಟವಾಗಿಲ್ಲದಿದ್ದರೆ ಅವರ ಭಾಗ್ಯದಿಂದಲೇ ಖೋತಾ ಆಗಬೇಕಷ್ಟೇ. ಹಾಗೆಂದೇ ದಾನ ಪಡೆದಮೇಲೂ ಹೆಚ್ಚಿನ ಬ್ರಾಹ್ಮಣರು ಬಡವರಾಗಿದ್ದರೆಂದರೆ ಅದು ಧ್ವನಿಸುವುದು ಹೀಗೆ ಖೋತಾ ಆಗಿದ್ದಿರಬಹುದಾದ ಸಾಧ್ಯತೆಯನ್ನೇ. ಬ್ರಾಹ್ಮಣ ಸೇರಿದಂತೆ ಎಲ್ಲ ವರ್ಗಗಳಿಗೆ ಅವುಗಳದ್ದೇ ಆದ ರಿಸ್ಕ್ ಇತ್ತು.

ಇವ್ಯಾವುದರ ಹಿನ್ನೆಲೆ ಇಟ್ಟುಕೊಳ್ಳದೇ ಆಗುವ ಬ್ರಾಹ್ಮಣರ ಮೇಲಿನ ಟೀಕೆ-ಟಿಪ್ಪಣಿಗಳು ಅಮೆರಿಕದ ಟ್ರಂಪ್ ಆಡಳಿತದ ಮಾದರಿಗಳಂತೆಯೇ ಬಾಲಿಶ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com