
ನವದೆಹಲಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಭಾರತದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ನೆನಪಿಗಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ, ವಿಶೇಷವಾಗಿ ಶ್ರಮಶೀಲ ಶಿಕ್ಷಕರಿಗೆ ಶಿಕ್ಷಕರದಿನದ ಶುಭಾಶಯಗಳು. ಮನಸ್ಸುಗಳನ್ನು ಪೋಷಿಸುವಲ್ಲಿ ಶಿಕ್ಷಕರ ಸಮರ್ಪಣೆ ಮತ್ತು ಉಜ್ವಲ ಭವಿಷ್ಯದ ಅಡಿಪಾಯವಾಗಿದೆ. ಅವರ ಬದ್ಧತೆ ಮತ್ತು ಸಹಾನುಭೂತಿ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ಮೊದಲ ಉಪ ರಾಷ್ಟ್ರಪತಿ, ಶಿಕ್ಷಣ ತಜ್ಞ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ನಮನ ಸಲ್ಲಿಸಿರುವ ಮೋದಿಯವರು, ರಾಧಾಕೃಷ್ಣನ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರ ಜೀವನ ಮತ್ತು ಚಿಂತನೆಗಳನ್ನು ಸ್ಮರಿಸುತ್ತೇವೆಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪೋಸ್ಟ್ ಮಾಡಿ, ಜ್ಞಾನದ ದೀವಿಗೆಯನ್ನು ಬೆಳಗಿ, ನಾಳಿನ ಭಾರತದ ಪ್ರಜೆಗಳನ್ನು ರೂಪಿಸುವ ಪ್ರತಿಯೊಬ್ಬ ಗುರುವಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಕೇವಲ ಪಠ್ಯವನ್ನು ಬೋಧಿಸುವುದಲ್ಲದೆ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮೂಲಕ ಸದೃಢ ಮತ್ತು ಪ್ರಗತಿಪರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ. ನಾಳಿನ ಭಾರತವನ್ನು ರೂಪಿಸುವಲ್ಲಿ ಅವರ ಕೊಡುಗೆಗೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಪೋಸ್ಟ್ ಮಾಡಿ, ವಿದ್ಯಾರ್ಥಿಗಳ ಆದರ್ಶ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಗಳು. ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಹೇಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪೋಸ್ಟ್ ಮಾಡಿ, ನಾಡಿನ ಎಲ್ಲ ಶಿಕ್ಷಕರಿಗೆ 'ಶಿಕ್ಷಕರ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು ಮತ್ತು ಮಾಜಿ ರಾಷ್ಟ್ರಪತಿ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಆ ಶ್ರೇಷ್ಠ ಶಿಕ್ಷಕರಿಗೆ ಪ್ರಣಾಮಗಳು. ಜ್ಞಾನ, ಸುಜ್ಞಾನವನ್ನು ಧಾರೆಯೆರೆದು, ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಸತ್ಪ್ರಜೆಗಳನ್ನಾಗಿ ರೂಪಿಸುವ ಎಲ್ಲಾ ಶಿಕ್ಷಕರಿಗೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.
Advertisement