
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭೀಕರ ಗುಡ್ಡ ಕುಸಿತವಾಗಿದ್ದು. ಗುಡ್ಡ ಕುಸಿತದ ರೋಚಕ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹೌದು.. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ನೌಹ್ರಧರ್ ಪ್ರದೇಶದ ಚೌಕರ್ ಗ್ರಾಮದ ಬಳಿ ಇಂದು ಅಂದರೆ ಸೆಪ್ಟೆಂಬರ್ 6 ರ ಶನಿವಾರ ಭಾರಿ ಭೂಕುಸಿತ ಸಂಭವಿಸಿದೆ.
ಗುಡ್ಡ ಕುಸಿತದ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬೆಟ್ಟದ ದೊಡ್ಡ ಭಾಗ ಕುಸಿಯುತ್ತಿರುವುದನ್ನು ಕಾಣಬಹುದು. ಭೂಕುಸಿತವು ಸುಮಾರು 200 ಮೀಟರ್‌ಗಳಷ್ಟು ವಿಸ್ತರಿಸಿದ್ದು, ಈ ಭೂ ಕುಸಿತದಲ್ಲಿ ಅಪಾಯಕ್ಕೆ ಸಿಲುಕಿದ್ದ ಐದು ಜನರನ್ನು ರಕ್ಷಿಸಲಾಗಿದೆ.
ಈ ಪ್ರದೇಶದಲ್ಲಿ ನೆಲೆಗೊಂಡಿರುವ ಮನೆಗಳಿಗೆ ಅಪಾಯವಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಈ ವರ್ಷ ಮಳೆಗಾಲದಿಂದಾಗಿ ಈ ಪ್ರದೇಶವು ಭಾರೀ ಹಾನಿಯನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಪರಿಣಾಮ ಅಲ್ಲಲ್ಲಿ ಪ್ರವಾಹ ಮತ್ತು ಭೂಕುಸಿತ ಪ್ರಕರಣಗಳು ವರದಿಯಾಗುತ್ತಿದೆ. ಇದಲ್ಲದೆ ಮೇಘಸ್ಫೋಟದಿಂದಾಗಿ ಈಗಾಗಲೇ ಹಲವು ಪ್ರದೇಶಗಳು ಜಲಾವೃತ್ತವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಏತನ್ಮಧ್ಯೆ, ಕಿನ್ನೌರ್‌ನ ನಾಥ್ಪಾ ಅಣೆಕಟ್ಟು ಬಳಿ ರಾಷ್ಟ್ರೀಯ ಹೆದ್ದಾರಿ -5 (NH-5) ನಲ್ಲೂ ಭೂಕುಸಿತ ಸಂಭವಿಸಿದೆ ಎನ್ನಲಾಗಿದೆ. ಬೆಟ್ಟದ ಕೆಳಗೆ ಹರಿಯುವ ಅವಶೇಷಗಳು 1,500 MW ನಾಥ್ಪಾ ಝಾಕ್ರಿ ಜಲವಿದ್ಯುತ್ ಯೋಜನೆಯನ್ನು ಅಪಾಯಕ್ಕೆ ಸಿಲುಕಿಸುತ್ತಿವೆ.
ಈ ತಿಂಗಳ ಆರಂಭದಲ್ಲಿ, ಕಿನ್ನೌರ್‌ನ ವಾಂಗ್ಟುನಲ್ಲಿ ಭಾರಿ ಭೂಕುಸಿತ ಸಂಭವಿಸಿ, ಹಲವಾರು ವಾಹನಗಳಿಗೆ ಹಾನಿಯಾಗಿತ್ತು.
ಭಾರಿ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ
ಇನ್ನು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ವ್ಯಾಪಕ ಹಾನಿಯಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಾಜ್ಯದಲ್ಲಿ ಇಲ್ಲಿಯವರೆಗೆ 355 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಪ್ರಕಾರ, ಭೂಕುಸಿತ, ದಿಢೀರ್ ಪ್ರವಾಹ, ಮೇಘಸ್ಫೋಟ, ಸಿಡಿಲು ಬಡಿತ ಮತ್ತು ಇತರ ಹವಾಮಾನ-ಪ್ರೇರಿತ ಕಾರಣಗಳಿಂದ 194 ಜನರು ಸಾವನ್ನಪ್ಪಿದ್ದರೆ, 161 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
Advertisement