
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಜರತ್‌ಬಲ್ ಮಸೀದಿಯ ನೂತನ ಕಟ್ಟಡದ ಅಡಿಗಲ್ಲಿನ ಮೇಲೆ ಕೆತ್ತಲಾಗಿದ್ದ ರಾಷ್ಟ್ರ ಲಾಂಛನ ಅಶೋಕ ಸ್ತಂಭವನ್ನು ಕಿತ್ತಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿಯ ಅಧ್ಯಕ್ಷೆ ಡಾ. ದರಕ್ಷಾನ್ ಅಂದ್ರಾಬಿ ಶುಕ್ರವಾರ ಹಜರತ್‌ಬಾಲ್ ಮಸೀದಿಯಲ್ಲಿ ನಡೆದ ಧ್ವಂಸ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಇದು ಪೂಜ್ಯ ಸ್ಥಳದ ಅಭಿವೃದ್ಧಿ ಮತ್ತು ಸೌಂದರ್ಯೀಕರಣವನ್ನು ಸಹಿಸಲಾಗದ ಮುಖ್ಯವಾಹಿನಿಯ ರಾಜಕೀಯ ನಾಯಕರ ಸಂಘಟಿತ ಕೃತ್ಯವಾಗಿದೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಂದ್ರಾಬಿ, 'ರಾಷ್ಟ್ರ ಲಾಂಛನ ಹಾನಿಗೊಳಗಾದ ಘಟನೆಯನ್ನು "ದರ್ಗಾದ ಹೃದಯ ಮತ್ತು ಭಕ್ತರ ನಂಬಿಕೆ ಮೇಲಾದ ಹಲ್ಲೆ ಎಂದು ಅವರು ಬಣ್ಣಿಸಿದರು. 'ಇದು ಕೇವಲ ಒಂದು ಚಿಹ್ನೆಯ ಮೇಲಿನ ದಾಳಿಯಲ್ಲ. ಇದು ಹಜರತ್‌ಬಾಲ್‌ನ ಆತ್ಮದ ಮೇಲಿನ ದಾಳಿಯಾಗಿದೆ. ಈಗ ನಮ್ಮ ಪವಿತ್ರ ಸ್ಥಳಗಳನ್ನು ಅಣಕಿಸುವ ಚುನಾಯಿತ ನಾಯಕರು ಪ್ರಾರ್ಥಿಸಿದ ಸಂವಿಧಾನದ ಮೇಲಿನ ದಾಳಿಯಾಗಿದೆ" ಎಂದು ಅವರು ಕಿಡಿಕಾರಿದರು.
ಇತ್ತೀಚಿನ ಪುನರ್ನಿರ್ಮಾಣ ಪ್ರಯತ್ನಗಳಿಂದ ಅಸಮಾಧಾನಗೊಂಡಿರುವ "ರಾಜಕೀಯ ವಿರೋಧಿಗಳು ಕಳುಹಿಸಿದ ಗೂಂಡಾಗಳು" ಈ ಧ್ವಂಸ ಕೃತ್ಯವನ್ನು ನಡೆಸಿದ್ದಾರೆ ಎಂದು ಡಾ. ಅಂದ್ರಾಬಿ ಆರೋಪಿಸಿದರು. ಈದ್-ಎ-ಮಿಲಾದ್-ಉನ್-ನಬಿಯಂದು ಹಜರತ್‌ಬಾಲ್ ಅಡಿಗಲ್ಲಿನ್ನು ಧ್ವಂಸಗೊಳಿಸುವುದು ಐತಿಹಾಸಿಕ ಮತ್ತು ವ್ಯಾಪಕವಾಗಿ ಖಂಡನಾರ್ಹ. ಅಂತೆಯೇ "ದಶಕಗಳ ಭ್ರಷ್ಟಾಚಾರದಲ್ಲಿ ಅಭಿವೃದ್ಧಿ ಹೊಂದಿದವರು ಈ ಅಭಿವೃದ್ಧಿಯನ್ನು ಸಹಿಸಲಾಗದೇ ದಾಳಿ ಮಾಡಿಸಿದ್ದಾರೆ ಎಂದು ಅವರು ಹೇಳಿದರು.
ಈ ಬಗ್ಗೆ ಮೊದಲೇ ಎಚ್ಚರಿಸಿದ್ದೆ
ಇದೇ ವೇಳೆ ಅಶಾಂತಿಯ ಸಾಧ್ಯತೆಯ ಬಗ್ಗೆ ಪೊಲೀಸರಿಗೆ ಮೊದಲೇ ನಾನು ಎಚ್ಚರಿಕೆ ನೀಡಿದ್ದೆ. ಈ ಜನರು ಕಲ್ಲು ಮತ್ತು ಸುತ್ತಿಗೆಗಳೊಂದಿಗೆ ಶಸ್ತ್ರಸಜ್ಜಿತರಾಗಿ ಬರುತ್ತಾರೆ ಎಂದು ನಾನು ಬೆಳಿಗ್ಗೆ SHO ಗಳಿಗೆ ಎಚ್ಚರಿಕೆ ನೀಡಿದ್ದೆ. ರಾಜಕೀಯ ನಾಯಕರು ಧಾರ್ಮಿಕ ಸ್ಥಳಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಂದ್ರಾಬಿ ಆರೋಪಿಸಿದರು.
ಇದು ಮುಸ್ಲಿಂ ಆಚರಣೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಅಧಿಕಾರಿಗಳು ಹೊಣೆ ಹೊರಬೇಕು. ಇದು ಭಯೋತ್ಪಾದಕ ಕೃತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂದ್ರಾಬಿ ಆಗ್ರಹಿಸಿದ್ದಾರೆ.
ಏನಿದು ಘಟನೆ?
ಶ್ರೀನಗರದ ಹಜರತ್‌ಬಲ್ ಮಸೀದಿಯ ನೂತನ ಕಟ್ಟಡದ ಅಡಿಗಲ್ಲಿನ ಮೇಲೆ ಅಶೋಕ ಲಾಂಛನವನ್ನು ಕೆತ್ತಲಾಗಿತ್ತು. ಆದರೆ ಇದನ್ನು ವಿರೋಧಿಸಿ ಮುಸ್ಲಿಮರು ಶುಕ್ರವಾರ–ಕಾಶ್ಮೀರ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡು ಅಡಿಗಲ್ಲಿನ ಮೇಲಿದ್ದ ಅಶೋಕ ಲಾಂಛನವನ್ನು ಹೊಂದಿದ್ದ ಅಡಿಗಲ್ಲನ್ನು ಪ್ರತಿಭಟನಕಾರರು ಕಿತ್ತುಹಾಕಿದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
Advertisement