
ನೋಯ್ಡಾ: ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು 400 ಕೆಜಿ ಆರ್ ಡಿಎಕ್ಸ್ ನೊಂದಿಗೆ ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದ ಮೇಲೆ ನೋಯ್ಡಾದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ತನ್ನ ವಿರುದ್ಧ ಕೇಸ್ ದಾಖಲಿಸಿದ ಸ್ನೇಹಿತನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಿ ಸೇಡು ತೀರಿಸಿಕೊಳ್ಳಲು ಈ ರೀತಿ ಹುಸಿ ಬೆದರಿಕೆ ಸಂದೇಶ ಕಳುಹಿಸಿದ್ದ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜೋತಿಷಿ, ವಾಸ್ತು ತಜ್ಞ ಎಂದು ಹೇಳಿಕೊಂಡಿದ್ದ ಆರೋಪಿ: ಆರೋಪಿಯನ್ನು ಬಿಹಾರದ ಪಾಟ್ನಾ ಮೂಲದ ಅಶ್ವನಿ ಕುಮಾರ್ (51) ಎಂದು ಗುರುತಿಸಲಾಗಿದೆ. ಈತ ಕಳೆದ ಐದು ವರ್ಷಗಳಿಂದ ನೋಯ್ಡಾದ ಸೆಕ್ಟರ್ 79 ರಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದು, ತನನ್ನು ಜ್ಯೋತಿಷಿ ಮತ್ತು ವಾಸ್ತು ತಜ್ಞ ಎಂದು ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರ ಮುಂಬೈ ಪೊಲೀಸರಿಗೆ ನೋಯ್ಡಾದಿಂದ ಸಂದೇಶ ಬಂದಿರುವುದಾಗಿ ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸೆಕ್ಟರ್ 113ರ ಪೊಲೀಸರು ಕೆಲವೇ ಗಂಟೆಗಳಲ್ಲಿ ಕುಮಾರ್‌ನನ್ನು ಬಂಧಿಸಿದ್ದಾರೆ.
ವೈಯಕ್ತಿಕ ದ್ವೇಷದಿಂದ ಹುಸಿ ಬೆದರಿಕೆ: ಕುಮಾರ್ ನನ್ನು ಸೆಕ್ಟರ್ 79 ರಿಂದ ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸುಮಿತ್ ಶುಕ್ಲಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಿರುವುದಾಗಿ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
2023 ರಲ್ಲಿ ಪಾಟ್ನಾದಲ್ಲಿ ತನ್ನ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರ್ ಬಯಸಿದ್ದ. ಈ ಪ್ರಕರಣದಲ್ಲಿ ಆತ ಮೂರು ತಿಂಗಳು ಜೈಲು ಶಿಕ್ಷೆಗೊಳಗಾಗಿದ್ದ. ಸೇಡು ತೀರಿಸಿಕೊಳ್ಳಲು ತನ್ನ ಸ್ನೇಹಿತ ಹೆಸರು ಬಳಸಿಕೊಂಡು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
400 ಕೆಜಿ ಆರ್ ಡಿಎಕ್ಸ್ ನೊಂದಿಗೆ 14 ಭಯೋತ್ಪಾದಕರು ಪ್ರವೇಶ: ಅನಂತ ಚತುರ್ಥಿ ಆಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗ 34 ವಾಹನಗಳಲ್ಲಿ 400 ಕೆಜಿ ಆರ್‌ಡಿಎಕ್ಸ್‌ನೊಂದಿಗೆ 14 ಪಾಕಿಸ್ತಾನದ ಭಯೋತ್ಪಾದಕರು ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ಬಂದ ನಂತರ ಮುಂಬೈ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು.
ಸಂಚಾರ ಪೊಲೀಸರ ಸಹಾಯವಾಣಿಗೆ ಕಳುಹಿಸಲಾದ ಸಂದೇಶದಲ್ಲಿ 'ಲಷ್ಕರ್-ಎ-ಜಿಹಾದಿ' ಎಂಬ ಗುಂಪಿನ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಸಂಬಂಧ ವರ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement