
ನವದೆಹಲಿ: ಈ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಜಗತ್ತೇ ನಿರೀಕ್ಷಿಸುತ್ತಿರುವಾಗ, ಯುಎನ್ ಬಿಡುಗಡೆ ಮಾಡಿದ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೆಪ್ಟೆಂಬರ್ 27 ರಂದು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನವು ಸೆಪ್ಟೆಂಬರ್ 9ರಂದು ಪ್ರಾರಂಭವಾಗಲಿದೆ. ಉನ್ನತ ಮಟ್ಟದ ಸಾಮಾನ್ಯ ಚರ್ಚೆಯು ಸೆಪ್ಟೆಂಬರ್ 23ರಿಂದ 29ರವರೆಗೆ ನಡೆಯಲಿದೆ. ಅಧಿವೇಶನದ ಸಾಂಪ್ರದಾಯಿಕ ಮೊದಲ ಭಾಷಣಕಾರರಾಗಿ ಬ್ರೆಜಿಲ್ ನಾಯಕರು ಭಾಗವಹಿಸಲಿದ್ದು, ನಂತರ ಅಮೆರಿಕ ಭಾಗವಹಿಸಲಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 23ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಬಳಿಕ ಟ್ರಂಪ್ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.
ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಾಮಾನ್ಯ ಚರ್ಚೆಗೆ ಭಾಷಣಕಾರರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯನ್ನು ವಿಶ್ವಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಭಾರತವನ್ನು ಪ್ರತಿನಿಧಿಸಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೆಪ್ಟೆಂಬರ್ 27ರಂದು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಈ ಹಿಂದೆ ಜುಲೈನಲ್ಲಿ ಬಿಡುಗಡೆಯಾದ ಪಟ್ಟಿಯ ಪ್ರಕಾರ, ಸೆಪ್ಟೆಂಬರ್ 26ರಂದು ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಬೇಕಿತ್ತು. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರು ಸೆಪ್ಟೆಂಬರ್ 26ರಂದು ಮಾತನಾಡಲಿದ್ದಾರೆ.
ಯುಎನ್‌ಜಿಎ ಸಾಮಾನ್ಯ ಚರ್ಚೆಗೆ ಭಾಷಣಕಾರರ ಪಟ್ಟಿ ತಾತ್ಕಾಲಿಕವಾಗಿದ್ದು, ಉನ್ನತಮಟ್ಟದ ಚರ್ಚೆ ಸಭೆ ಆರಂಭಕ್ಕೆ ಒಂದು ವಾರದ ಮುಂದೆ ವೇಳಾಪಟ್ಟಿ ಮತ್ತು ಭಾಷಣಕಾರರಲ್ಲಿ ಬದಲಾವಣೆಗಳ ಸಾಧ್ಯತೆ ಯಾವಾಗಲೂ ಇರುತ್ತದೆ. ಅದಕ್ಕೆ ಅನುಗುಣವಾಗಿ ಆ ವೇಳೆಯಲ್ಲಿ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುವುದು.
ಈ ಸಭೆಯು ಬೀಜಿಂಗ್‌ನಲ್ಲಿ ನಡೆದ 1995ರ ಯಶಸ್ವಿ ಸಮ್ಮೇಳನದ ನಂತರದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನವು ಜಗತ್ತಿನಾದ್ಯಂತ ಲಿಂಗ ಸಮಾನತೆಯನ್ನು ಮುನ್ನಡೆಸುವಲ್ಲಿನ ಸಾಧನೆಗಳು, ಕೈಗೊಂಡ ಕ್ರಮಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಮೇಲೆ ಗಮನ ಹರಿಸಲಿದೆ.
ಸಭೆಯಲ್ಲಿ ಇತರೆ ದೇಶಗಳ ಉನ್ನತ ನಾಯಕರು ಅಥವಾ ಪ್ರಧಾನಿಗಳು ತಮ್ಮ ದೇಶದ ನೀತಿಗಳನ್ನು ಮತ್ತು ಜಾಗತಿಕ ದೃಷ್ಟಿಕೋನವನ್ನು ಮಂಡಿಸುತ್ತಾರೆ. ಪ್ರಧಾನಿ ಮೋದಿಯವರು ಈ ಹಿಂದೆ 2014, 2015, 2019, ಮತ್ತು 2021ರಲ್ಲಿ ಯುಎನ್‌ಜಿಎಯಲ್ಲಿ ಭಾಷಣ ಮಾಡಿದ್ದಾರೆ. ಆದರೆ, ಈ ವರ್ಷ ಭಾರತ ಮೋದಿಯವರ ಭಾಷಣಕ್ಕಾಗಿ ಸ್ಥಾನ ಕಾಯ್ದಿರಿಸಲು ಪ್ರಯತ್ನಿಸಿದರೂ, ಅಂತಿಮವಾಗಿ ಜೈಶಂಕರ್ ಅವರನ್ನು ಕಳುಹಿಸಲು ನಿರ್ಧರಿಸಲಾಗಿದೆ.
ಈ ನಿರ್ಧಾರ ಭಾರತದ ರಾಜತಾಂತ್ರಿಕ ಕಾರ್ಯತಂತ್ರದ ಭಾಗವಾಗಿರಬಹುದು, ವಿಶೇಷವಾಗಿ ಅಮೆರಿಕದೊಂದಿಗಿನ ಸುಂಕ ವಿವಾದ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಜಾಗತಿಕ ಉದ್ವಿಗ್ನತೆಗಳ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Advertisement