
ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿರುವ ಕಟ್ಟಡವೊಂದರಲ್ಲಿ ಸೋಮವಾರ ಏರ್ ಕಂಡಿಷನರ್‌ನ ಕಂಪ್ರೆಸರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಸದಸ್ಯರು ಮತ್ತು ಅವರ ಸಾಕು ನಾಯಿ ಸಾವಿಗೀಡಾಗಿರುವ ಧಾರುಣ ಘಟನೆ ನಡೆದಿದೆ.
ಎನ್‌ಡಿಟಿವಿ ವರದಿ ಪ್ರಕಾರ, ಸಂತ್ರಸ್ತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ.
ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಬೆಳಗಿನ ಜಾವ 1.30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಕಪೂರ್ ಕುಟುಂಬ ನೆಲೆಸಿದ್ದ ಎರಡನೇ ಮಹಡಿಗೆ ದಟ್ಟ ಹೊಗೆ ಆವರಿಸಿದೆ. ಆಗ ಕುಟುಂಬ ಗಾಢ ನಿದ್ರೆಯಲ್ಲಿತ್ತು. ಘಟನೆ ನಡೆದ ಮೊದಲ ಮಹಡಿಯಲ್ಲಿರುವ ಮನೆ ಖಾಲಿಯಾಗಿತ್ತು ಎಂದು ವರದಿಯಾಗಿದೆ.
ಹೊಗೆಯಿಂದಾಗಿ ಉಸಿರುಗಟ್ಟಿ ಕುಟುಂಬದ ಮೂವರು ಸಾವಿಗೀಡಾಗಿದ್ದು, ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಮಗ ತನ್ನನ್ನು ತಾನು ಉಳಿಸಿಕೊಳ್ಳಲು ಕಿಟಕಿಯಿಂದ ಹೊರಗೆ ಹಾರಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ದೊಡ್ಡ ಶಬ್ದ ಕೇಳಿದ ನಂತರ ಎಚ್ಚರಗೊಂಡಿದ್ದಾಗಿ ನೆರೆಹೊರೆಯವರು ಹೇಳಿದ್ದಾರೆ. ನಂತರ ನಾವು ಕಟ್ಟಡದಲ್ಲಿದ್ದ ಇತರ ಜನರನ್ನು ರಕ್ಷಿಸಲು ಧಾವಿಸಿದೆವು ಎಂದು ಮಾಯಾಂಕ್ ವರದಿಗಾರರಿಗೆ ತಿಳಿಸಿದರು.
ಏಳು ಜನರ ಕುಟುಂಬವು ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿತ್ತು, ಆದರೆ ಮೂರನೇ ಮಹಡಿಯನ್ನು ಕಪೂರ್ ತಮ್ಮ ಕಚೇರಿಯಾಗಿ ಬಳಸುತ್ತಿದ್ದರು ಎಂದು ಅವರು ಹೇಳಿದರು.
Advertisement