
ದೋಡಾ: ಜಮ್ಮು ಮತ್ತು ಕಾಶ್ಮೀರದ ದೋಡಾದ ಮನೆಯೊಂದರಲ್ಲಿ ಗುರುವಾರ ಕಡಿಮೆ ತೀವ್ರತೆಯ ಸ್ಫೋಟ ಸಂಭಿವಿಸಿದ ನಂತರ ಇಬ್ಬರನ್ನು ಬಂಧಿಸಲಾಗಿದೆ. ಇದು ಈಗಾಗಲೇ ರಾಜಕೀಯ ಅಶಾಂತಿಯಿಂದ ನಲುಗುತ್ತಿರುವ ಜಿಲ್ಲೆಯಲ್ಲಿ ಹೊಸ ಆತಂಕ ಮೂಡಿಸಿದೆ.
ಪೋಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಸ್ಫೋಟದ ತನಿಖೆ ನಡೆಸುತ್ತಿದ್ದಾರೆ. "ಸ್ಟಿಕ್ ಗ್ರೆನೇಡ್" ನಿಂದ ಈ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ತನ್ನ ಮನೆಯ ಕಸದಲ್ಲಿ ಇದು ಕಂಡುಬಂದಿದೆ ಎಂದು ಹುಸೇನ್ ಎಂಬಾತ ಹೇಳಿಕೊಂಡಿದ್ದಾನೆ.
ಜಾಮಿಯಾ ಮಸೀದಿ ಬಳಿಯ ದುಮ್ರಿ-ತುಕರ್ ಮೊಹಲ್ಲಾ ಪ್ರದೇಶದಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಜಾವೇದ್ ಹುಸೇನ್ ಅವರ ಮನೆಯ ಪ್ರವೇಶದ್ವಾರದಲ್ಲಿ ಚೂರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೂಡಲೇ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹುಸೇನ್ ಮತ್ತು ಖುರ್ಷಿದ್ ಎಂಬ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹುಸೇನ್ ಅವರ ದಿವಂಗತ ತಂದೆ ಅಬ್ದುಲ್ ಅಹದ್ ಇಟೂ ತನ್ನ ಮನೆಯಲ್ಲಿ ಆಗಾಗ್ಗೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದರು. ಇದೇ ಮನೆಯಲ್ಲಿ 1996ರಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆಗೈಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹಾಲಿ ಶಾಸಕ ಮೆಹರಾಜ್ ಮಲಿಕ್ ಅವರನ್ನು ಜಿಲ್ಲಾಡಳಿತ ಕಠಿಣ ಸಾರ್ವಜನಿಕ ಭದ್ರತಾ ಕಾಯ್ದೆ (PSA) ಅಡಿಯಲ್ಲಿ ಬಂಧಿಸಿದ ನಂತರ ದೋಡಾದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಂತೆಯೇ ಈ ಸ್ಫೋಟ ನಡೆದಿದೆ. ಜಿಲ್ಲಾಡಳಿತ ಮೊಬೈಲ್ ಇಂಟರ್ನೆಟ್ ಮತ್ತು ವೈಫೈ ಸೇವೆಗಳನ್ನು ಸ್ಥಗಿತಗೊಳಿಸಿದೆ. ಮಲಿಕ್ ಅವರನ್ನು ಬಂಧಿಸಿದಾಗಿನಿಂದಲೂ ಪ್ರತಿಭಟನೆಗಳು ನಡೆಯುತ್ತಿವೆ. ಇದು ಘರ್ಷಣೆಗೆ ಕಾರಣವಾಗಿದ್ದು, 80ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
Advertisement