
ಪಾಟ್ನಾ: ಪಾಟ್ನಾದ ರಾಜೇಂದ್ರ ನಗರ ಟರ್ಮಿನಲ್ ಬಳಿ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಆರ್‌ಜೆಡಿ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ವೈಶಾಲಿ ಜಿಲ್ಲೆಯ ರಾಘೋಪುರ ನಿವಾಸಿ ರಾಜ್ ಕುಮಾರ್ ಅಲಿಯಾಸ್ ಅಲಾ ರೈ ಎಂದು ಗುರುತಿಸಲಾಗಿದೆ.
"ಈ ಘಟನೆ ಬುಧವಾರ ರಾತ್ರಿ 10 ಗಂಟೆಗೆ ರಾಜೇಂದ್ರ ನಗರ ಟರ್ಮಿನಲ್ ಬಳಿಯ ಬೀದಿ ಸಂಖ್ಯೆ 17ರಲ್ಲಿ ನಡೆದಿದೆ ಎಂದು ಎಸ್‌ಪಿ(ಪಾಟ್ನಾ ಪೂರ್ವ) ಪರಿಚಯ್ ಕುಮಾರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ತೆರಳಿ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು" ಎಂದು ಅವರು ಹೇಳಿದ್ದಾರೆ.
ಸ್ಥಳದಿಂದ ಆರು ಬಳಕೆಯಾದ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರಿಗೂ ಹೆಚ್ಚು ಜನ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.
"ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಸ್ಥಳೀಯರು ರೈ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಭೂಮಿ ಮಾರಾಟ-ಖರೀದಿಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ" ಎಂದು ಎಸ್‌ಪಿ ತಿಳಿಸಿದ್ದಾರೆ.
Advertisement