
ಮುಂಬೈ: ದೆಹಲಿ ಹೈಕೋರ್ಟ್ ಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಬಾಂಬೆ ಹೈಕೋರ್ಟ್ ಗೂ ಶುಕ್ರವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಇದು ತೀವ್ರ ಭೀತಿಯನ್ನು ಸೃಷ್ಟಿಸಿತು ಮತ್ತು ಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಇಮೇಲ್ ಬಂದ ನಂತರ, ಹೈಕೋರ್ಟ್ ಸಂಕೀರ್ಣವನ್ನು ಖಾಲಿ ಮಾಡಲಾಯಿತು ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
"ಬಾಂಬೆ ಹೈಕೋರ್ಟ್‌ನ ಅಧಿಕೃತ ಇಮೇಲ್ ವಿಳಾಸಕ್ಕೆ ಬೆದರಿಕೆ ಇಮೇಲ್ ಬಂದಿದ್ದು, ಕಟ್ಟಡದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ, ಪೊಲೀಸ್ ಸಿಬ್ಬಂದಿ ಹೈಕೋರ್ಟ್‌ಗೆ ಧಾವಿಸಿದರು ಮತ್ತು ಎಲ್ಲಾ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಸಂದರ್ಶಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆವರಣವನ್ನು ಖಾಲಿ ಮಾಡುವಂತೆ ಕೇಳಕೊಳ್ಳಲಾಯಿತು ಎಂದು ಅವರು ಹೇಳಿದರು.
"ಕಟ್ಟಡವನ್ನು ಖಾಲಿ ಮಾಡಿಸಿ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ(BDDS) ಮತ್ತು ಶ್ವಾನ ದಳದ ಸಹಾಯದಿಂದ ಪ್ರಸ್ತುತ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರದ ವಿವಿಧ ಪ್ರಮುಖ ಸಂಸ್ಥೆಗಳು ಮತ್ತು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆಗಳು ಬಂದಿವೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
Advertisement