
ಜುನಾಗಢ್: ಮಣಿಪುರ ಬಹಳ ಸಮಯದಿಂದ ಸಮಸ್ಯೆಯಿಂದ ಬಳಲುತ್ತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಗಲಭೆಪೀಡಿತ ರಾಜ್ಯಕ್ಕೆ ಭೇಟಿ ನೀಡುವುದು "ದೊಡ್ಡ ವಿಷಯ"ವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
"ವೋಟ್ ಚೋರಿ"(ಮತ ಕಳ್ಳತನ) ಪ್ರಸ್ತುತ ದೇಶದ ಮುಂದಿರುವ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಒತ್ತಿ ಹೇಳಿದರು.
ಇಂದು ಗುಜರಾತ್‌ನ ಜುನಾಗಢ್ ಜಿಲ್ಲೆಯ ಕೆಶೋಡ್ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಎಲ್ಲೆಡೆ ಜನ "ವೋಟ್ ಚೋರಿ"(ಮತ ಕಳ್ಳ) ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಶನಿವಾರ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ಒಳ್ಳೆಯ ವಿಚಾರ. ಆದರೆ ಮಣಿಪುರ ಬಹಳ ದಿನಗಳಿಂದ ಸಮಸ್ಯೆಯಲ್ಲಿದೆ. ಪ್ರಧಾನಿ ಈಗ ಅಲ್ಲಿಗೆ ಹೋಗಲು ನಿರ್ಧರಿಸಿದ್ದಾರೆ. ಆದ್ದರಿಂದ ಅದು ಈಗ ದೊಡ್ಡ ವಿಷಯವಲ್ಲ. ಈಗ ದೇಶದ ಪ್ರಮುಖ ವಿಷಯವೆಂದರೆ 'ವೋಟ್ ಚೋರಿ'(ಮತ ಕಳ್ಳತನ)" ಎಂದು ರಾಹುಲ್ ಗಾಂಧಿ ಹೇಳಿದರು.
"ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಯಲ್ಲಿ ಅವರು ಮತ ಕದ್ದಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಾವು ಅದನ್ನು ಸಾಬೀತುಪಡಿಸಿದ್ದೇವೆ. ಆದ್ದರಿಂದ, ಈಗ ಮುಖ್ಯ ವಿಷಯವೆಂದರೆ ಮತ ಕಳ್ಳತನ. ಎಲ್ಲೆಡೆ ಜನ 'ವೋಟ್ ಚೋರಿ'(ಮತ ಕಳ್ಳ) ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ರಾಯ್‌ಬರೇಲಿಯ ಲೋಕಸಭಾ ಸಂಸದ ತಿಳಿಸಿದರು.
ಮೋದಿ ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡಲಿದ್ದು, ಚುರಾಚಂದ್‌ಪುರ ಮತ್ತು ರಾಜಧಾನಿ ಇಂಫಾಲ್‌ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಬಾರಿ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
Advertisement