
ಪುಣೆ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ಮುಖ್ಯಸ್ಥ ನವಲ್ ಕಿಶೋರ್ ರಾಮ್ ಮತ್ತಿತರ ಅಧಿಕಾರಿಗಳೊಂದಿಗೆ ನಗರದ ವಿವಿಧೆಡೆ ಭೇಟಿ ನೀಡಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಹಡಪ್ಸರ್ ವಿಧಾನಸಭಾ ಕ್ಷೇತ್ರದ ಕೇಶವ್ ನಗರಕ್ಕೆ ಭೇಟಿ ನೀಡಿದಾಗ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳ ಬಗ್ಗೆ ಜನರು ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪವಾರ್, ಉತ್ತಮ ಮೂಲಸೌಕರ್ಯ ಬೇಡಿಕೆಗಳ ಬಗ್ಗೆ ಆಡಳಿತಕ್ಕೆ ಅರಿವಿದೆ ಎಂದು ಹೇಳಿದರು. ತಡವಾಗಿ ಬಂದಿದ್ದಕ್ಕಾಗಿ ಕ್ಷಮೆಯಾಚಿಸಿದ ಉಪ ಮುಖ್ಯಮಂತ್ರಿ, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಮಹಿಳೆಯೊಬ್ಬರು ಪವಾರ್ ಅವರನ್ನು ದಿವಂಗತ ಪರಿಕ್ಕರ್ ಅವರಂತೆ ಕೆಲಸ ಮಾಡುವಂತೆ ಮತ್ತು ಟ್ರಾಫಿಕ್ ಸಮಸ್ಯೆ ಸ್ವತಃ ಪರಿಶೀಲಿಸಲು ಅನಿರೀಕ್ಷಿತ ಭೇಟಿ ಕೈಗೊಳ್ಳುವಂತೆ ಕೇಳಿಕೊಂಡರು.
ಗೋವಾದಲ್ಲಿ ಪರಿಕ್ಕರ್ ಸಾಹೇಬ್ ದಿಢೀರ್ ಭೇಟಿ ನೀಡುತ್ತಿದ್ದಂತೆ ನೀವು ಅಥವಾ ಯಾರಾದಾರೊಬ್ಬರು ಟ್ರಾಫಿಕ್ ಫಿಕ್ ಅವರ್ ನಲ್ಲಿ ಭೇಟಿ ನೀಡಬೇಕು ಎಂದು ಆ ಮಹಿಳೆ ಹೇಳಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಪವಾರ್ ಅವರು 'ಯಾರು ಪರಿಕ್ಕರ್' ಎಂದು ಕೇಳುವ ಮೂಲಕ ಆಕೆಯ ಮಾತಿಗೆ ಅಡ್ಡಿಪಡಿಸಿದ್ದಾರೆ. ನಂತರ ಮಹಿಳೆ ಗೋವಾದ ದಿವಂಗತ ಬಿಜೆಪಿ ನಾಯಕನ ಬಗ್ಗೆ ಹೇಳುತ್ತಿರುವುದಾಗಿ ಹೇಳಿದರು.
ಆಗ ಉದ್ರೇಕ್ತಗೊಂಡಂತೆ ಕಂಡುಬಂದ ಮಹಿಳೆ, ಈ ಪ್ರದೇಶದ ಜನರು ಟ್ರಾಫಿಕ್ ಸಮಸ್ಯೆಯಿಂದ ತುಂಬಾ ಹತಾಶರಾಗಿದ್ದಾರೆ, ಅನೇಕರು ಬೇರೆಡೆಗೆ ಸ್ಥಳಾಂತರಿಸಲು ಯೋಚಿಸುತ್ತಿದ್ದಾರೆ ಎಂದು ಹೇಳಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪರಿಕ್ಕರ್ ಮೂರು ಬಾರಿ ಗೋವಾದ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಅಕ್ಟೋಬರ್ 2014 ಮತ್ತು ಮಾರ್ಚ್ 2017 ರ ನಡುವೆ ರಕ್ಷಣಾ ಸಚಿವರಾಗಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದ ಪರಿಕ್ಕರ್ ಅವರು ಜನರ ಸಮಸ್ಯೆಗಳನ್ನು ತಿಳಿಯಲು ಸ್ಕೂಟರ್ ನಲ್ಲಿ ಸುತ್ತಾಡುತ್ತಿದ್ದರು.
ಅವರು ಮಾರ್ಚ್ 17, 2019 ರಂದು ಕ್ಯಾನ್ಸರ್‌ನಿಂದ ನಿಧನರಾದರು. ಗೋವಾದ ಮೊಪಾದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲೈಸಸ್ (IDSA) ಗೆ ಅವರ ಹೆಸರನ್ನು ಇಡಲಾಗಿದೆ.
Advertisement