
ನುಮಾಲಿಗಢ: ಕಚ್ಚಾ ತೈಲ ಮತ್ತು ಅನಿಲ ಆಮದುಗಳನ್ನು ಕಡಿತಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಿಸುವಂತೆ ಅಮೆರಿಕ ಶೇ.25 ರಷ್ಟು ಸುಂಕವನ್ನು ಭಾರತದ ಮೇಲೆ ವಿಧಿಸಿದ ನಂತರ ಪ್ರಧಾನಿ ಮೋದಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಅಸ್ಸಾಂನ ನುಮಾಲಿಗಢದಲ್ಲಿ12,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವಾಗ, ಕಚ್ಚಾ ತೈಲ ಮತ್ತು ಅನಿಲಕ್ಕಾಗಿ ವಿದೇಶಿ ರಾಷ್ಟ್ರಗಳ ಮೇಲೆ ದೇಶ ಅವಲಂಬಿತವಾಗಿದೆ ಎಂದು ತಿಳಿಸಿದರು.
ಇದನ್ನು ಬದಲಾಯಿಸಲು, ನಮ್ಮ ಇಂಧನ ಅವಶ್ಯಕತೆಗಳನ್ನು ಪೂರೈಸುವತ್ತ ಗಮನಹರಿಸಬೇಕು. ಸರ್ಕಾರ ತೈಲ ಅನ್ವೇಷಣೆ ಮತ್ತು ಹಸಿರು ಶಕ್ತಿ ಉತ್ಪಾದನೆಯತ್ತ ಕಾರ್ಯೋನ್ಮುಖವಾಗಿರುವುದಾಗಿ ಹೇಳಿದರು.
ಎಥೆನಾಲ್ ಶಕ್ತಿಯ ಪ್ರಮುಖ ಪರ್ಯಾಯ ಮೂಲವಾಗಿದೆ. ನುಮಲಿಗಢದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಜೈವಿಕ ಎಥೆನಾಲ್ ಸಂಸ್ಕರಣಾಗಾರ ರೈತರು ಮತ್ತು ಬುಡಕಟ್ಟು ಜನಾಂಗದವರಿಗೆ ಗಣನೀಯವಾಗಿ ಪ್ರಯೋಜನ ನೀಡುತ್ತದೆ ಎಂದು ಪಾಲಿಪ್ರೊಪಿಲೀನ್ ಸ್ಥಾವರಕ್ಕೆ ಅಡಿಪಾಯ ಹಾಕಿದ್ದು ಸ್ಥಳೀಯ ಆರ್ಥಿಕತೆಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ಶಕ್ತಿ ಮತ್ತು ಸೆಮಿ ಕಂಡಕ್ಟರ್ ಗಳು 'ಆತ್ಮನಿರ್ಭರ್ ಭಾರತ್'ಗೆ ಎರಡು ಪ್ರಮುಖ ಚಾಲಕಗಳಾಗಿವೆ. ಈ ಕ್ಷೇತ್ರಗಳಲ್ಲಿ ಅಸ್ಸಾಂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.
ಅಸ್ಸಾಂನಲ್ಲಿ ದಂಗೆ ಮತ್ತು ಅಶಾಂತಿಗೆ ಕಾಂಗ್ರೆಸ್ ಕಾರಣವಾಗಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಅಸ್ಸಾಂ ಅನ್ನು ವ್ಯಾಪಾರ ಮತ್ತು ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡುವುದಕ್ಕೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
Advertisement