
ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಸಂಭವಿಸಿದ್ದು, ತಮ್ಸಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಇಲ್ಲಿನ ಹಲವಾರು ಮನೆಗಳು, ದೇವಾಲಯಗಳು ಜಲಾವೃತವಾಗಿದೆ. ಘಟನೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತಪಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ.
ಕಾರ್ಲಿಗಾಡ್ ನದಿಯಲ್ಲಿ ಉಂಟಾದ ಭಾರೀ ಪ್ರವಾಹದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಸಂಭವಿಸಿದ್ದು, ಈ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ನಿರಂತರ ಮಳೆಯಿಂದಾಗಿ ನದಿ ಅಪಾಯದ ಮಟ್ಟ ಮೀರಿದ್ದು, ಪ್ರಮುಖ ಸೇತುವೆ ಕುಸಿದು, ದಡದಲ್ಲಿರುವ ಆಸ್ತಿಪಾಸ್ತಿಗಳಿಗೆ ತೀವ್ರ ಹಾನಿಯಾಗಿದೆ.
ಈ ಪ್ರವಾಹದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಡೆಹ್ರಾಡೂನ್‌ನ ಸಹಸ್ರಧಾರದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ. ಅಲ್ಲದೆ, ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ನಡುವೆ ಪ್ರವಾಹದ ಬಗ್ಗೆ ದೂರವಾಣಿ ಕರೆಯ ಮೂಲಕ ಪರಿಸ್ಥಿತಿಯನ್ನು ವಿಚಾರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಿಎಂ ಧಾಮಿರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲದೆ, ಕೇಂದ್ರದಿಂದ ಸಂಪೂರ್ಣ ಸಹಕಾರ ನೀಡಲಿದ್ದು. ಈ ವಿಪತ್ತಿನ ಸಮಯದಲ್ಲಿ ಕೇಂದ್ರ ಸರ್ಕಾರ ಉತ್ತರಾಖಂಡದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳು ಸ್ಥಳದಲ್ಲಿ ಬುಲ್ಡೋಜರ್‌ಗಳೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಡೆಹ್ರಾಡೂನ್‌ನ ಸಹಸ್ರಧಾರ, ಮಾಲ್ ದೇವತಾ ಮತ್ತು ಮಸ್ಸೂರಿಯಲ್ಲಿ ಹಾನಿ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಹೇಳಿದ್ದಾರೆ.
ಡೆಹ್ರಾಡೂನ್‌ನಲ್ಲಿ 2-3 ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ, ಈ ವರೆಗೂ 300 ರಿಂದ 400 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗು ಮಾಹಿತಿ ನೀಡಿದ್ದಾರೆ.
ದರ್‌ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಹರಿ ಗಿರಿ ಅವರು ಮಾತನಾಡಿ, ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಡೆಹ್ರಾಡೂನ್‌ನ ಐಟಿ ಪಾರ್ಕ್ ಪ್ರದೇಶದಲ್ಲಿ ನೀರು ನಿಂತಿರುವುದಾಗಿ ತಿಳಿದುಬಂದಿದೆ. ಅನೇಕ ಕಚೇರಿಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆಂದು ತಿಳಿದುಬಂದಿದೆ.
Advertisement