
ಇಂದೋರ್: ಪಾನಮತ್ತ ಚಾಲಕನೊಬ್ಬ ಪಾದಚಾರಿಗಳು ಮತ್ತು ವಾಹನಗಳ ಮೇಲೆ ಟ್ರಕ್ ನುಗ್ಗಿಸಿದ್ದರಿಂದ ಕನಿಷ್ಠ ಮೂವರು ಮೃತಪಟ್ಟು, ಹಲವು ಮಂದಿ ತೀವ್ರ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಈ ಭಯಾನಕ ಘಟನೆ ನಡೆದಿದ್ದು, ಹಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ರಸ್ತೆಯ ಶಿಕ್ಷಕ ನಗರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್, ಜನರ ಗುಂಪು ಮತ್ತು 10ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಟ್ರಕ್ ಚಾಲಕ ಮೊದಲಿಗೆ ರಾಮಚಂದ್ರ ನಗರ ಸಮೀಪ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬಡಾ ಗಣಪತಿ ಪ್ರದೇಶದ ಕಡೆಗೆ ಟ್ರಕ್ ನುಗ್ಗಿಸಿದ್ದಾನೆ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
ಅಪಘಾತದ ಬೆನ್ನಲ್ಲೇ ಟ್ರಕ್ ಚಾಲಕನನ್ನು ಬಂಧಿಸಿದ್ದು, ಮಲ್ಹರ್‌ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಟ್ರಕ್ ಹರಿದ ಪರಿಣಾಮ ಶವಗಳು ಚೂರುಚೂರಾಗಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಗೊಂದಲದ ನಡುವೆಯೇ ಟ್ರಕ್ ಗೆ ಬೆಂಕಿ ಹತ್ತಿಕೊಂಡಿದೆ. ಉದ್ರಿಕ್ತರು ಟ್ರಕ್ ಗೆ ಬೆಂಕಿ ಹಚ್ಚಿದರು ಎಂದು ಪ್ರಾಥಮಿಕ ವರದಿಗಳು ಹೇಳಿದೆ. ಆದರೆ ಈ ಮೊದಲು ಅಪಘಾತಗೊಂಡು ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಫೋಟಿಸಿ ಬೆಂಕಿ ಹತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬೆಂಕಿ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.
Advertisement