
ಬುಲಂದ್‌ಶಹರ್: ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 9 ಮಂದಿ ಸಾವನ್ನಪ್ಪಿ, 42 ಜನ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಅರ್ನಿಯಾ ಬೈಪಾಸ್ ಬಳಿಯ ಬುಲಂದ್‌ಶಹರ್-ಅಲಿಗಢ ಗಡಿಯಲ್ಲಿ ಇಂದು ಬೆಳಗಿನ ಜಾವ 2.10 ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕ್ಯಾಂಟರ್ ಟ್ರಕ್ ಹಿಂದಿನಿಂದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ದಿನೇಶ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಟ್ರ್ಯಾಕ್ಟರ್ ಟ್ರಾಲಿ ಕಾಸ್ಗಂಜ್ ಜಿಲ್ಲೆಯ ರಫತ್‌ಪುರ ಗ್ರಾಮದಿಂದ ರಾಜಸ್ಥಾನದ ಜಹರ್‌ಪೀರ್‌ಗೆ ತೀರ್ಥಯಾತ್ರೆಗಾಗಿ 61 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿ ಸೇರಿದಂತೆ ಪೊಲೀಸ್ ತಂಡಗಳು ಅಪಘಾತ ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ಖುರ್ಜಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement