
ಡೆಹ್ರಾಡೂನ್ (ಉತ್ತರಾಖಂಡ): ಡೆಹ್ರಾಡೂನ್‌ನಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ತಮ್ಸಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತಪಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ.
ದೇವಾಲಯದ ಅರ್ಚಕ ಆಚಾರ್ಯ ಬಿಪಿನ್ ಜೋಶಿ ಅವರು ಮಾತನಾಡಿ, ಬೆಳಿಗ್ಗೆಯಿಂದಲೇ ನದಿಯ ನೀರಿ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿ, ಉಕ್ಕಿ ಹರಿಯುತ್ತಿತ್ತು. ಇದೀಗ ಇಡೀ ದೇವಾಲಯದ ಆವರಣವು ಜಲಾವೃತಗೊಂಡಿದೆ. ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿದೆ. ಈ ರೀತಿಯ ಪರಿಸ್ಥಿತಿ ಬಹಳ ಸಮಯದಿಂದ ಸಂಭವಿಸಿರಲಿಲ್ಲ. ಜನರು ನದಿಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ನೀರಿನ ಮಟ್ಟ 10-12 ಅಡಿಗಳಿಗೆ ಏರಿಕೆಯಾಗಿದೆ. ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಬೆಳಿಗ್ಗೆ 4:45 ರ ಸುಮಾರಿಗೆ, ನೀರು ದೇವಾಲಯ ಪ್ರವೇಶಿಸಿತು. ನಂತರ ಕ್ರಮೇಣ ನೀರಿನ ಮಟ್ಟ ಹೆಚ್ಚಾಗಲು ಆರಂಭವಾಗಿ, 10-12 ಅಡಿಗಳಿಗೆ ನೀರಿನ ಮಟ್ಟ ಏರಿತು. 'ಶಿವಲಿಂಗವನ್ನೂ ನೀರು ತಲುಪಿತು. ಬಳಿಕ ಹಗ್ಗದ ಸಹಾಯದಿಂದ ನಾವು ಮೇಲಕ್ಕೆ ಬಂದೆವು ಎಂದು ತಿಳಿಸಿದ್ದಾರೆ.
ನೀರುವ ರಭಸದಿಂದ ಹರಿಯುತ್ತಿದ್ದು, ದೇವಾಲಯಕ್ಕೆ ಸಾಕಷ್ಟು ಹಾನಿಯುಂಟಾಗಿದೆ. ಜನರು ನದಿಯಿಂದ ದೂರವಿರಬೇಕೆಂದು ಹೇಳಿದ್ದಾರೆ.
ಏತನ್ಮಧ್ಯೆ, ಭಾರೀ ಮಳೆಯು ಋಷಿಕೇಶದ ಮೇಲೂ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ಚಂದ್ರಭಾಗ ನದಿ ಬೆಳಿಗ್ಗೆಯಿಂದ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, ನೀರು ಹೆದ್ದಾರಿಯನ್ನು ತಲುಪಿದೆ ಎಂದು ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಪ್ರಕಾರ, ನದಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿರುವುದಾಗಿ ತಿಳಿಸಿದೆ.
ಹಲವಾರು ವಾಹನಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿವೆ. ನಿವಾಸಿಗಳು ಜಾಗರೂಕರಾಗಿರಲು ಮತ್ತು ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಕೆರೆಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
Advertisement