
ಕೊಚ್ಚಿ: ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ "ಮದರ್ ಮೇರಿ ಕಮ್ ಟು ಮಿ" ಪುಸ್ತಕದ ಮಾರಾಟ, ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಗುರುವಾರ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ. ಈ ಪುಸ್ತಕದ ಮುಖಪುಟದಲ್ಲಿ ಶಾಸನಬದ್ಧ ಆರೋಗ್ಯ ಎಚ್ಚರಿಕೆ ಇಲ್ಲದೆ ಅವರು ಸಿಗರೇಟ್ ಸೇದುತ್ತಿರುವ ಫೋಟೋ ಮುದ್ರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರ ಪೀಠ, ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಯಾವುದೇ ಸಂಸ್ಥೆ ಅಥವಾ ಕಾರ್ಯವಿಧಾನವಿದೆಯೇ ಎಂದು ನ್ಯಾಯಾಲಯಕ್ಕೆ ತಿಳಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಕೊಚ್ಚಿ ಮೂಲದ ವಕೀಲ ರಾಜಸಿಂಹನ್ ಸಲ್ಲಿಸಿದ್ದು, ಮುಖಪುಟದ ಚಿತ್ರವು ಧೂಮಪಾನದ ಕ್ರಿಯೆಯನ್ನು "ವೈಭವೀಕರಿಸುವ" ಮೂಲಕ ಸಮಾಜಕ್ಕೆ, ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರಿಗೆ "ಹಾನಿಕಾರಕ ಸಂದೇಶ" ರವಾನಿಸಲಾಗಿದೆ ಎಂದು ವಾದಿಸಿದ್ದಾರೆ.
ತಮ್ಮಂತಹ ಪ್ರಸಿದ್ಧ ಲೇಖಕಿಯೊಬ್ಬರು "ಧೂಮಪಾನವನ್ನು ವೈಭವೀಕರಿಸುವುದು", "ಬೌದ್ಧಿಕ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ" ಎಂಬ ಸುಳ್ಳು ನಂಬಿಕೆಯನ್ನು ಸೃಷ್ಟಿಸುವುದಕ್ಕೆ ಸಮಾನವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಈ ಚಿತ್ರವು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ, ಕಾಯ್ದೆ(COTPA), 2003 ರ ಉಲ್ಲಂಘನೆಯಾಗಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.
Advertisement