
ನವದೆಹಲಿ: "ಮತ ಕಳ್ಳರನ್ನು" ರಕ್ಷಿಸಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಗಳು ಆಧಾರರಹಿತ ಎಂದು ಭಾರತೀಯ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮಾಡಿದ ಆರೋಪಗಳು ತಪ್ಪಾಗಿದ್ದು ಮತ್ತು ಆಧಾರರಹಿತವಾಗಿವೆ. ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿಯವರ ಚಿಂತನ ತಪ್ಪು. ಬಾಧಿತ ವ್ಯಕ್ತಿಯ ಒಪ್ಪಿಗೆ ಇಲ್ಲದೆಯೇ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಅವರು ನೇರ ಆರೋಪ ಮಾಡಿದ್ದು, ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆಂದು ಹೇಳಿದ್ದಾರೆ.
ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಹೇಗೆ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂಬುದನ್ನು ಅರಿಯಲು ಇಂದಿನ ಯುವಸಮುದಾಯಕ್ಕೆ ಇದೊಂದು ಮಹತ್ವದ ಉದಾಹರಣೆಯಾಗಿದೆ. ನಾನು ಈ ಹಿಂದೆ ಭರವಸೆ ನೀಡಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ. ಕರ್ನಾಟಕದ ಅಳಂದದಲ್ಲಿ 2023ರ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಅಳಿಸಿಹಾಕುವ ಯತ್ನ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿತ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ.
ಈ ಎಲ್ಲಾ ಕೃತ್ಯಗಳಿಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಾನು ಗಂಭೀರ ಆರೋಪ ಮಾಡುತ್ತಿದ್ದೇನೆ. ಇದನ್ನು ಹಗುರವಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗವು ಮತಗಳ್ಳರನ್ನು ರಕ್ಷಿಸುತ್ತಿದೆ. ಈ ಕಳ್ಳರೇ ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement