
ನವದೆಹಲಿ: ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಭಾರತ, 'ಪರಸ್ಪರ ಹಿತಾಸಕ್ತಿ, ಸೂಕ್ಷ್ಮತೆಗಳ ಗಣನೆಗೆ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೇವೆ' ಎಂದು ಹೇಳಿದೆ.
ಪಾಕಿಸ್ತಾನದೊಂದಿಗಿನ MBS ನ ರಕ್ಷಣಾ ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ 'ಸೌದಿ ಅರೇಬಿಯಾ ಪರಸ್ಪರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಭಾರತ ಆಶಿಸುತ್ತಿದೆ' ಎಂದು ಹೇಳಿದೆ.
ಈ ಕುರಿತು ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಭಯೋತ್ಪಾದಕರು ಮತ್ತು ಪಾಕಿಸ್ತಾನ ಸರ್ಕಾರದ ನಡುವಿನ ಸಂಬಂಧದ ಬಗ್ಗೆ ಜಗತ್ತಿಗೆ ತಿಳಿದಿದೆ. ಸೌದಿ ಅರೇಬಿಯಾ ಪರಸ್ಪರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಭಾರತ ಆಶಿಸುತ್ತಿದೆ ಎಂದು ಹೇಳಿದರು.
"ಭಾರತ ಮತ್ತು ಸೌದಿ ಅರೇಬಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಅದು ಕಳೆದ ಹಲವಾರು ವರ್ಷಗಳಿಂದ ಗಮನಾರ್ಹವಾಗಿ ಆಳವಾಗಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಪರಸ್ಪರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ನಾವು ಭಾವಿಸುತ್ತೇವೆ" ಎಂದು ರಣಧೀರ್ ಜೈಸ್ವಾಲ್ ಹೇಳಿದರು.
ಇದೇ ವೇಳೆ ಪಾಕಿಸ್ತಾನ ಮತ್ತು ಭಯೋತ್ಪಾದನೆಯ ನಂಟನ್ನು ಮತ್ತೆ ಜಗಜ್ಜಾಹಿರು ಮಾಡಿದ ಜೈಸ್ವಾಲ್, ಪಾಕಿಸ್ತಾನದಿಂದ ಇತ್ತೀಚೆಗೆ ಬಂದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ವೀಡಿಯೊಗಳ ಬಗ್ಗೆ ಅವರು ಹೇಳಿದರು.
'ಭಯೋತ್ಪಾದನೆ ವಿಷಯಗಳಲ್ಲಿ, ಭಯೋತ್ಪಾದಕರು ಮತ್ತು ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ನಡುವಿನ ಸಂಬಂಧದ ಬಗ್ಗೆ ಜಗತ್ತಿಗೆ ತಿಳಿದಿದೆ ಎಂಬುದು ನಮಗೆ ಸ್ಪಷ್ಟವಾಗಿದೆ. ನಾವೆಲ್ಲರೂ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದನೆ ನಿಗ್ರಹದ ವಿರುದ್ಧ ಹೋರಾಡಬೇಕು. ಭಯೋತ್ಪಾದನೆಯನ್ನು ಎದುರಿಸಲು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ನಾವು ಜಗತ್ತಿಗೆ ಕರೆ ನೀಡುತ್ತೇವೆ ಎಂದರು.
ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ಪೊಲೀಸರು ಭಾರತೀಯ ಎಂಜಿನಿಯರ್‌ನನ್ನು ಗುಂಡಿಕ್ಕಿ ಕೊಂದ ಬಗ್ಗೆ ಮಾತನಾಡಿದ ಜೈಸ್ವಾಲ್, "ಈ ವಿಷಯದ ಬಗ್ಗೆ ನಾವು ಸ್ಥಳೀಯ ಅಧಿಕಾರಿಗಳು ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ ಮತ್ತು ನಾವು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದರು.
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ಬುಧವಾರ (ಸೆಪ್ಟೆಂಬರ್ 17, 2025) ಭದ್ರತಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದ"ಕ್ಕೆ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಬ್ದುಲಜೀಜ್ ಅಲ್ ಸೌದ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಸಹಿ ಹಾಕಿದರು. ಈ ಒಪ್ಪಂದದಡಿಯಲ್ಲಿ, ಒಂದು ದೇಶದ ವಿರುದ್ಧದ ಯಾವುದೇ ದಾಳಿಯನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂಬ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಹೊಸ ರಕ್ಷಣಾ ಒಪ್ಪಂದವು "ಎರಡೂ ರಾಷ್ಟ್ರಗಳ ಭದ್ರತೆಯನ್ನು ಹೆಚ್ಚಿಸುವ ಹಂಚಿಕೆಯ ಬದ್ಧತೆಯನ್ನು" ಪ್ರತಿಬಿಂಬಿಸುತ್ತದೆ ಮತ್ತು ಇದು "ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರದ ಅಂಶಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಯಾವುದೇ ಆಕ್ರಮಣದ ವಿರುದ್ಧ ಜಂಟಿ ತಡೆಗಟ್ಟುವಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ" ಎಂದು ಪಾಕಿಸ್ತಾನ-ಸೌದಿ ಅರೇಬಿಯಾ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ದೋಹಾದಲ್ಲಿ ನಡೆದ ಅರಬ್ ರಾಷ್ಟ್ರಗಳ ಸಭೆ
ಕಳೆದ ವಾರ, ಇಸ್ರೇಲ್ ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ಸಮಾಲೋಚಕರ ವಸತಿ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿತು. ಇದರ ನಂತರ ದೋಹಾದಲ್ಲಿ ಅರಬ್ ರಾಷ್ಟ್ರಗಳ ಸಭೆ ನಡೆಯಿತು, ಅಲ್ಲಿ ನ್ಯಾಟೋಗೆ ಹೋಲುವ ಅರಬ್ ಮಿಲಿಟರಿ ಮೈತ್ರಿಕೂಟವನ್ನು ರಚಿಸುವ ಕಲ್ಪನೆಯನ್ನು ಚರ್ಚಿಸಲಾಯಿತು. ಈ ಉಪಕ್ರಮವನ್ನು ಪಾಕಿಸ್ತಾನ ಮುನ್ನಡೆಸಿತು. ಪಾಕಿಸ್ತಾನ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಈಜಿಪ್ಟ್, ಜೋರ್ಡಾನ್ ಮತ್ತು ಮೊರಾಕೊ ಸೇರಿದಂತೆ ಹಲವಾರು ದೇಶಗಳ ನಾಯಕರು ಭಾಗವಹಿಸಿದ್ದರು ಎನ್ನಲಾಗಿದೆ.
Advertisement