
ಜಮ್ಮು: ಉಧಂಪುರ ಜಿಲ್ಲೆಯ ದೂರದ ಅರಣ್ಯ ಪ್ರದೇಶದಲ್ಲಿ ಶನಿವಾರ ಮುಂಜಾನೆ ಸೇನೆ ಮತ್ತು ಪೊಲೀಸರು ಭಯೋತ್ಪಾದಕರಿಗಾಗಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದು, ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಉಧಂಪುರದ ದುಡು-ಬಸಂತ್‌ಗಢ ಪ್ರದೇಶದ ಸಿಯೋಜ್ ಧಾರ್ ಅರಣ್ಯ ಗಡಿ ಮತ್ತು ದೋಡಾದ ಭದೇರ್ವಾದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಯೋಧ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಯೋಧನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ರಾತ್ರಿಯಿಡೀ ಸೇನೆ ಸುತ್ತುವರಿದಿದ್ದು, ಶನಿವಾರ ಬೆಳಿಗ್ಗೆ ಜಂಟಿ ಶೋಧ ಕಾರ್ಯಾಚರಣೆ ಪುನರಾರಂಭವಾಯಿತು. ಇಬ್ಬರಿಂದ ಮೂವರು ಭಯೋತ್ಪಾದಕರು ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಧಂಪುರ ಮತ್ತು ದೋಡಾ ಎರಡೂ ಕಡೆಗಳಿಂದ ಡ್ರೋನ್‌ಗಳು ಮತ್ತು ಸ್ನಿಫರ್ ನಾಯಿಗಳನ್ನು ಹೊಂದಿದ ಹೆಚ್ಚುವರಿ ತಂಡಗಳನ್ನು ರವಾನಿಸಲಾಗಿದೆ. ಸದ್ಯ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದಾಗ್ಯೂ, ಇಲ್ಲಿಯವರೆಗೆ ಉಗ್ರರ ಸುಳಿವು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement