
ಮುಂಬೈ: ನವರಾತ್ರಿಯ ಸಂದರ್ಭದಲ್ಲಿ 'ಗರ್ಬಾ' ಕಾರ್ಯಕ್ರಮಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂಬ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಲಹೆಯನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭಾನುವಾರ ಟೀಕಿಸಿದ್ದಾರೆ. ಅಂತಹ ಕರೆಗಳು "ಹಿಂಸಾಚಾರವನ್ನು ಆಹ್ವಾನಿಸುವುದಕ್ಕೆ ಸಮನಾಗಿದೆ ಎಂದು ಹೇಳಿದ್ದಾರೆ.
ಗಾರ್ಬಾ ನೃತ್ಯ ಗುಜರಾತಿನ ಅತ್ಯಂತ ಜನಪ್ರಿಯ ಜಾನಪದ ನೃತ್ಯ ಪ್ರಕಾರವಾಗಿದೆ. ನವರಾತ್ರಿ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಗರ್ಬಾ ನೃತ್ಯದೊಂದಿಗೆ ದಾಂಡಿಯಾ ಪ್ರದರ್ಶನ ಇರುತ್ತದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ಇದನ್ನು ಆಚರಿಸಲಾಗುತ್ತದೆ.
'ಗರ್ಬಾ' ಕಾರ್ಯಕ್ರಮಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ವಿಎಚ್‌ಪಿ ಶನಿವಾರ ಹೇಳಿದೆ. "ಲವ್ ಜಿಹಾದ್" ನಿದರ್ಶನಗಳನ್ನು ತಪ್ಪಿಸಲು ಆಧಾರ್ ಕಾರ್ಡ್ ಪರಿಶೀಲಿಸುವಂತೆ ಆಯೋಜಕರಿಗೆ ಸಲಹೆ ನೀಡಿದೆ. ಗರ್ಭಾ ಸಂದರ್ಭದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡಬಾರದು. ಇದು ಪವಿತ್ರ ಪೂಜೆಯಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಲ್ಲಾ ಎಂದು ವಿಹೆಚ್ ಪಿ ನಾಯಕರೊಬ್ಬರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಮದಾಸ್ ಅಠಾವಳೆ, ವಿಹೆಚ್ ಪಿ ಆದೇಶವನ್ನು ಬಲವಾಗಿ ಖಂಡಿಸಿದ್ದಾರೆ. ಗಾರ್ಬಾಕ್ಕೆ ಯಾರು ಹೋಗಬೇಕು ಮತ್ತು ಯಾರು ಹೋಗಬಾರದು ಎಂದು ನಿರ್ಧರಿಸುವುದಕ್ಕೆ ವಿಶ್ವ ಹಿಂದೂ ಪರಿಷತ್ ಯಾರು? ಎಂದು ಕಿಡಿಕಾರಿದ್ದಾರೆ. ಇಂತಹ ಸಲಹೆ ಕೇವಲ ಆಯೋಜಕರಿಗೆ ಸೂಚನೆ ನೀಡುವುದಕ್ಕೆ ಸೀಮಿತವಾಗಿಲ್ಲ. ಹಿಂಸಾಚಾರವನ್ನು ಪ್ರಚೋದಿಸಲು ಕೆಲವು ಮೂಲಭೂತ ಅಂಶಗಳಿಗೆ ಮುಕ್ತ ಆಹ್ವಾನವಾಗಿದೆ ಎಂದಿದ್ದಾರೆ.
ಈ ಸಲಹೆಯಿಂದಾಗಿ ನವರಾತ್ರಿಯ ಸಮಯದಲ್ಲಿ ದೇಶದಲ್ಲಿ ಯಾವುದೇ ಘರ್ಷಣೆಗಳು, ಹಲ್ಲೆಗಳು ಅಥವಾ ಧಾರ್ಮಿಕ ಘರ್ಷಣೆಗಳು ಸಂಭವಿಸಿದರೆ, ಸಂಪೂರ್ಣ ಜವಾಬ್ದಾರಿ ವಿಎಚ್‌ಪಿ ಮತ್ತು ಅದರ ಸಂಬಂಧಿತ ಸಂಘಟನೆಗಳ ಮೇಲಿರುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯದ ರಾಜ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಇಂತಹ ನಡೆಗಳು ಭಾರತದ ಏಕತೆ, ವೈವಿಧ್ಯತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಹೃದಯವನ್ನು ಹೊಡೆಯುತ್ತವೆ. ನವರಾತ್ರಿಯು ಆರಾಧನೆ ಮತ್ತು ಸಂತೋಷದ ಹಬ್ಬವಾಗಿದೆ ಮತ್ತು ಇದನ್ನು ದ್ವೇಷ ಮತ್ತು ಅನುಮಾನದ ವೇದಿಕೆಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ, ಇದು ಅತ್ಯಂತ ಖಂಡನೀಯವಾಗಿದೆ" ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಮುಖ್ಯಸ್ಥರು ಹೇಳಿದ್ದಾರೆ.
ಸಂವಿಧಾನದ ಪರಿಚ್ಛೇದ 14, 15 ಮತ್ತು 25 ರ ಅಡಿಯಲ್ಲಿ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಲಾಗಿದೆ. ಯಾವುದೇ ಸಂಸ್ಥೆಯು ಯಾರು ಹಬ್ಬವನ್ನು ಆಚರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಗರ್ಬಾ ಕೇವಲ ಧಾರ್ಮಿಕ ಸಂಪ್ರದಾಯವಲ್ಲ ಆದರೆ ಸಂಗೀತ, ನೃತ್ಯ ಮತ್ತು ಸಾಮಾಜಿಕ ಸಾಮರಸ್ಯದ ಆಚರಣೆಯಾಗಿದೆ. ನವರಾತ್ರಿಯಲ್ಲಿ ಸಂಘಟಕರು ಮತ್ತು ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಠಾವಳೆ ಸರ್ಕಾರ ಮತ್ತು ಆಡಳಿತವನ್ನು ಒತ್ತಾಯಿಸಿದ್ದಾರೆ.
Advertisement