
ನವದೆಹಲಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್ (Operation Sindoor) ಸೇನಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾದ S-400 ವಾಯುರಕ್ಷಣಾ ವ್ಯವಸ್ಥೆಯ ವಿತರಣೆ 2026ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ವರದಿಯೊಂದು ಹೇಳಿದೆ.
2018ರಲ್ಲಿ ಭಾರತ ಮತ್ತು ರಷ್ಯಾ ನಡುವೆ ನಡೆದಿದ್ದ $5.43 ಬಿಲಿಯನ್ ಮೌಲ್ಯದ ಒಪ್ಪಂದದ ಅನ್ವಯ ಭಾರತಕ್ಕೆ ನೀಡಬೇಕಿದ್ದ S-400 ಟ್ರಯಂಫ್ (ಟ್ರಯಂಫ್) ವಾಯು ರಕ್ಷಣಾ ವ್ಯವಸ್ಥೆಗಳ ವಿತರಣೆಯನ್ನು ರಷ್ಯಾ ಮುಂದಿನ ವರ್ಷ ಅಂದರೆ 2026ರ ಹೊತ್ತಿಗೆ ಪೂರ್ಣಗೊಳಿಸಲಿದೆ ಎಂದು ಸೋಮವಾರ ಮಾಧ್ಯಮ ವರದಿ ತಿಳಿಸಿದೆ.
ಅಂದು ರಷ್ಯಾ ಭಾರತಕ್ಕೆ ಐದು S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಂತೆ ರಷ್ಯಾ 2026ರಲ್ಲಿ ಬಾಕಿ ಇರುವ S-400 ಘಟಕಗಳನ್ನು ನೀಡುವ ಮೂಲಕ ಒಪ್ಪಂದ ಪೂರ್ಣಗೊಳಿಸಲಿದೆ.
ಮೂಲಗಳ ಪ್ರಕಾರ ಒಪ್ಪಂದದ ಅನ್ವಯ ಈಗಾಗಲೇ ರಷ್ಯಾ ಭಾರತಕ್ಕೆ ನಾಲ್ಕು S-400 ಘಟಕಗಳನ್ನು ಪೂರೈಸಿದೆ. ಐದನೇ ಮತ್ತು ಅಂತಿಮ ಘಟಕವನ್ನು ರಷ್ಯಾ ಮುಂದಿನ ವರ್ಷ ತಲುಪಿಸಲಿದೆ ಎಂದು ರಷ್ಯಾ ಸರ್ಕಾರಿ ಸ್ವಾಮ್ಯದ TASS ಸುದ್ದಿಸಂಸ್ಥೆ ವರದಿ ಮಾಡಿದೆ.
ಹಿಂದಿನ ಮಾಧ್ಯಮ ವರದಿಗಳ ಪ್ರಕಾರ, US ನಿರ್ಬಂಧಗಳ ಬೆದರಿಕೆಯನ್ನು ನಿರ್ಲಕ್ಷಿಸಿ $5.43 ಬಿಲಿಯನ್ ಒಪ್ಪಂದಕ್ಕೆ (ರೂ. 40,000 ಕೋಟಿ) ಅಕ್ಟೋಬರ್ 5, 2018 ರಂದು ಉಭಯ ದೇಶಗಳು ಔಪಚಾರಿಕವಾಗಿ ಸಹಿ ಹಾಕಿದ್ದವು.
ಮಾರ್ಚ್ 2021 ರಲ್ಲಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಭಾರತದ ರಷ್ಯಾದ S-400 ವಾಯು ಕ್ಷಿಪಣಿ ವ್ಯವಸ್ಥೆಯ ಖರೀದಿಯ ಬಗ್ಗೆ ಚರ್ಚಿಸಿದರು ಮತ್ತು S-400 ಖರೀದಿಯು CAATSA ನಿರ್ಬಂಧಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು.
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ
ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂದೂರ್ ಸಮಯದಲ್ಲಿ S-400 ವಾಯು ರಕ್ಷಣಾ ಕ್ಷಿಪಣಿಗಳು ಭಾರತದ ಪರ ನಿರ್ಣಾಯಕ ಪಾತ್ರವಹಿಸಿದ್ದವು. ಪಾಕಿಸ್ತಾನದಿಂದ ಬಂದ ಶತ್ರುಪಾಳಯದ ಕ್ಷಿಪಣಿ ಮತ್ತು ವಾಯು ಗುರಿಗಳನ್ನು ಅವುಗಳು ಗುರಿ ತಲುಪದಂತೆ ಆಗಸದಲ್ಲಿಯೇ ನಾಶ ಮಾಡಿತ್ತು. ಆ ಮೂಲಕ ಎಸ್-400 ಬಹಳ ಪರಿಣಾಮಕಾರಿ ಎಂದು ಸಾಬೀತಾಯಿತು.
ಈ ಬೆಳವಣಿಗೆ ಬೆನ್ನಲ್ಲೇ ರಷ್ಯಾ ನಾಯಕರ ಭೇಟಿ ವೇಳೆ ಭಾರತ ಹೆಚ್ಚಿನ ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಅದರ ಹೆಚ್ಚು ಮುಂದುವರಿದ S-500 ಕ್ಷಿಪಣಿ ವ್ಯವಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.
Advertisement