
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಮಂಗಳವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಪಶ್ಚಿಮ ಬಂಗಾಳದ ರಾಜಧಾನಿ ಸಂಪೂರ್ಣ ಸ್ಥಬ್ದವಾಗಿದ್ದು, ವಿದ್ಯುತ್ ಶಾಕ್ ನಿಂದ ಕನಿಷ್ಠ ಏಳು ಜನ ಸಾವನ್ನಪ್ಪಿದ್ದಾರೆ.
ಮಹಾನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ ಮತ್ತು ಸಾರಿಗೆ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಇದು "ಅಭೂತಪೂರ್ವ" ಮಳೆ ಎಂದು ಅಚ್ಚರಿ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂತಹ ಮಳೆಯನ್ನು ನಾನು ಎಂದೂ ನೋಡಿಲ್ಲ ಎಂದು ಹೇಳಿದ್ದಾರೆ.
ಫರಕ್ಕಾ ಬ್ಯಾರೇಜ್‌ನ ಕಳಪೆ ಹೂಳೆತ್ತುವಿಕೆ ಮತ್ತು ಖಾಸಗಿ ವಿದ್ಯುತ್ ಉಪಯುಕ್ತತೆ ಸಿಇಎಸ್‌ಸಿಯ ಅಸಮರ್ಪಕ ಕಾರ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದೀದಿ, ಜನರು ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವಂತೆ ಮನವಿ ಮಾಡಿದರು.
"ನಾನು ಈ ರೀತಿಯ ಮಳೆಯನ್ನು ಎಂದಿಗೂ ನೋಡಿಲ್ಲ. ಮೇಘ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಜನರ ಬಗ್ಗೆ ನನಗೆ ತುಂಬಾ ದುಃಖವಾಗಿದೆ. ತೆರೆದ ಅಥವಾ ಬಳಸದ ತಂತಿಗಳಿಂದ ವಿದ್ಯುತ್ ಸ್ಪರ್ಶಿಸಿ 7-8 ಜನರು ಸಾವನ್ನಪ್ಪಿದ್ದಾರೆ ಎಂದು ನಾನು ಕೇಳಿದೆ. ತುಂಬಾ ದುರದೃಷ್ಟಕರ. ಮೃತರ ಕುಟುಂಬಗಳಿಗೆ ಸಿಇಎಸ್‌ಸಿ ಉದ್ಯೋಗ ನೀಡಬೇಕು ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಾವು ಸಾಧ್ಯವಿರುವ ಎಲ್ಲಾ ಸಹಾಯವನ್ನು ಸಹ ಮಾಡುತ್ತೇವೆ" ಎಂದು ಬ್ಯಾನರ್ಜಿ ಬಂಗಾಳಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
3 ಗಂಟೆಯಲ್ಲಿ 185 ಮಿ.ಮೀ. ಮಳೆ
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮೂರು ಗಂಟೆಗಳಲ್ಲಿ ಕೋಲ್ಕತ್ತಾದ ನಗರ ಪ್ರದೇಶಗಳಲ್ಲಿ 185 ಮಿ.ಮೀ. ಮಳೆಯಾಗಿದೆ.
ಗರಿಯಾ ಕಾಮದಹರಿಯಂತಹ ಕೆಲವು ಪ್ರದೇಶದಲ್ಲಿ 332 ಮಿ.ಮೀ ಮಳೆಯಾದರೆ, ಜೋಧ್‌ಪುರ ಪಾರ್ಕ್ 285 ಮಿ.ಮೀ ಹಾಗೂ ಕಾಲಿಘಾಟ್ 280.2 ಮಿಮೀ ಮಳೆಯಾಗಿದೆ ಎಂದು ಐಎಂಡಿ ಹೇಳಿದೆ.
ವರುಣನ ಅಬ್ಬರದಿಂದ ಅತಿದೊಡ್ಡ ಹಬ್ಬವಾದ ದುರ್ಗಾಪೂಜೆ ಸಂಭ್ರಮದಲ್ಲಿದ್ದ ಕೋಲ್ಕತ್ತಾ ಜನರಿಗೆ ಭಾರಿ ಆಘಾತವನ್ನುಂಟು ಮಾಡಿದೆ.
ವರುಣಾರ್ಭಟಕ್ಕೆ ಮನೆಗಳು, ರಸ್ತೆಗಳು, ದಿನಸಿ ಸಾಮಾಗ್ರಿ, ಕಾರು-ಬೈಕ್ ಎಲ್ಲವೂ ನೀರುಪಾಲಾಗಿವೆ. ಇದಲ್ಲದೆ ಸಾರ್ವಜನಿಕ ಸೇವೆಗಳಾದ ಮೆಟ್ರೋ, ಬಸ್, ರೈಲು ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಏಳು ಜನರು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ.
Advertisement