
ಹಾಪುರ: ವಿಚಿತ್ರ ವೈದ್ಯಕೀಯ ಪ್ರಕರಣವೊಂದರಲ್ಲಿ, ಉತ್ತರ ಪ್ರದೇಶದ ಹಾಪುರದ ಖಾಸಗಿ ಆಸ್ಪತ್ರೆಯ ವೈದ್ಯರು, ಮಾದಕ ವ್ಯಸನಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಹೊಟ್ಟೆಯಿಂದ ಎರಡು ಪೆನ್ನುಗಳು, 19 ಟೂತ್ ಬ್ರಷ್‌ಗಳು ಮತ್ತು 29 ಚಮಚಗಳನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೇವಾನಂದನಿ ಆಸ್ಪತ್ರೆಯ ವೈದ್ಯರ ಪ್ರಕಾರ, ಬುಲಂದ್‌ಶಹರ್ ನಿವಾಸಿ ಸಚಿನ್ ಅವರನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಲಾಗಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸಚಿನ್ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಟ್ರಾಸೌಂಡ್ ನಂತರ, ಅವರ ಹೊಟ್ಟೆಯಲ್ಲಿ ಅಸಾಮಾನ್ಯ ವಸ್ತುಗಳು ಸಿಲುಕಿಕೊಂಡಿರುವುದನ್ನು ವೈದ್ಯರು ಗಮನಿಸಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಅಧ್ಯಕ್ಷ ಡಾ. ಶ್ಯಾಮ್ ಕುಮಾರ್ ಮತ್ತು ಡಾ. ಸಂಜಯ್ ರೈ ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆಸಿದ ಶಸ್ತ್ರಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದರು.
"ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಾವು ಎರಡು ಪೆನ್ನುಗಳು, 19 ಟೂತ್ ಬ್ರಷ್‌ಗಳು ಮತ್ತು 29 ಚಮಚಗಳನ್ನು ಹೊರ ತೆಗೆದಿದ್ದೇವೆ. ರೋಗಿಯ ಜೀವವನ್ನು ಉಳಿಸಲಾಗಿದೆ" ಎಂದು ಕುಮಾರ್ ಹೇಳಿದ್ದಾರೆ.
ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿನ್ ಡ್ರಗ್ಸ್ ಅಮಲಿನಲ್ಲಿ ಈ ವಸ್ತುಗಳನ್ನು ನುಂಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Advertisement