
ಇಂದೋರ್: ಪ್ರೀತಿ ಸಂಬಂಧ ಮುಂದುವರೆಸಲು ನಿರಾಕರಿಸಿದ ಯುವತಿ ಮೇಲೆ ವ್ಯಕ್ತಿಯೋರ್ವ ಸ್ಕೂಟರ್ ನಿಂದ ಗುದ್ದಿದ ಭೀಕರ ಘಟನೆಯೊಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ.
ಮಧ್ಯಪ್ರದೇಶದ ಇಂದೋರ್ ನ ಭಾಗ್ಯಲಕ್ಷ್ಮಿ ನಗರದ ಹಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರೀತಿಸಿ ಕಾರಣಾಂತರಗಳಿಂದ ದೂರಾಗಿದ್ದ ಪ್ರೇಮಿಯೋರ್ವ ಮತ್ತೆ ತನ್ನ ಪ್ರೇಯಸಿ ಜೊತೆಗೆ ಪ್ಯಾಚ್ ಅಪ್ ಗೆ ಮುಂದಾಗಿದ್ದಾನೆ.
ಈ ವೇಳೆ ಆಕೆ ಆತನ ಸಂಧಾನ ನಿರಾಕರಿಸಿದ ಹಿನ್ನಲೆಯಲ್ಲಿ ಆಕೆಯೊಂದಿಗೆ ಜಗಳ ಮಾಡಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಆಕೆಗೆ ತನ್ನ ಸ್ಕೂಟರ್ ನಿಂದ ಗುದ್ದಿದ್ದಾನೆ.
ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಈ ವಿಡಿಯೋ ದಾಖಲಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಹಿರಾ ನಗರ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ರಾಜೇಂದ್ರ ಚೌರಾಸಿ ಎಂಬಾತ ಮಹಿಳೆಯೊಬ್ಬಳೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ. ಬಳಿಕ ಕಾರಣಾಂತರಗಳಿಂದ ಈ ಜೋಡಿ ಬೇರಾಗಿತ್ತು. ಆದರೆ ಬಳಿಕ ಮತ್ತೆ ಬಂದ ರಾಜೇಂದ್ರ ಚೌರಾಸಿ ಆಕೆಯ ಬಳಿ ಪ್ಯಾಚ್ ಅಪ್ ಮಾಡಿಕೊಂಡು ಸಂಬಂಧ ಮುಂದುವರೆಸುವ ಮಾತನಾಡಿದ್ದಾನೆ.
ಈ ವೇಳೆ ಮಹಿಳೆ ಅದಕ್ಕೆ ಒಪ್ಪಿಲ್ಲ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಇಬ್ಬರೂ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಬಳಿಕ ಮಹಿಳೆ ತನ್ನ ಪಾಡಿಗೆ ತಾನು ಹೋಗಲು ಮುಂದಾಗಿದ್ದು ಈ ವೇಳೆ ಆಕೆಯನ್ನು ಆರೋಪಿ ರಾಜೇಂದ್ರ ಚೌರಾಸಿ ತನ್ನ ಸ್ಕೂಟರ್ ನಲ್ಲಿ ಹಿಂಬಾಲಿಸಿದ್ದಾನೆ.
ಈ ವೇಳೆ ವೇಗವಾಗಿ ಆತ ಬರುತ್ತಿರುವುದನ್ನು ಕಂಡ ಮಹಿಳೆ ತನ್ನ ರಕ್ಷಣೆಗಾಗಿ ಆತನತ್ತ ಕಲ್ಲು ತೂರಿದ್ದಾಳೆ. ಈ ವೇಳೆ ನೋಡ ನೋಡುತ್ತಲೇ ರಾಜೇಂದ್ರ ಚೌರಸಿ ಆಕೆಯನ್ನು ಸ್ಕೂಟರ್ ನಿಂದ ಗುದ್ದಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂತೆಯೇ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆತನ ವಿರುದ್ಧ ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಿರುಕುಳ, ಹಲ್ಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಆರೋಪಿ ವಿರುದ್ಧ 9 ಕ್ರಿಮಿನಲ್ ಪ್ರಕರಣ ದಾಖಲು, ಐದು ಪ್ರಕರಣ ಈ ಮಹಿಳೆಯದ್ದೇ
ಅಂತೆಯೇ ಆರೋಪಿ ರಾಜೇಂದ್ರ ಚೌರಾಸಿ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಐದು ಪ್ರಕರಣಗಳು ಸಂತ್ರಸ್ಥ ಮಹಿಳೆಯೇ ದಾಖಲಿಸಿದ ಪ್ರಕರಣಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿಂದೆ ನಡೆದ ಗಲಾಟೆಗಳ ಸಂದರ್ಭದಲ್ಲಿ ಮಹಿಳೆ ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ.
Advertisement