
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಮಾತನಾಡುತ್ತಿದ್ದಾರೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಆ ಈ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ ಮತ್ತು ಸಂಪೂರ್ಣ ಆಧಾರರಹಿತವಾಗಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವುದೇ ಹಂತದಲ್ಲೂ ಮಾತನಾಡಿಲ್ಲ. ಅಂತಹ ಯಾವುದೇ ಸಂಭಾಷಣೆ ನಡೆದಿಲ್ಲ. ನ್ಯಾಟೋದಂತಹ ಪ್ರಮುಖ ಮತ್ತು ಗೌರವಾನ್ವಿತ ಸಂಸ್ಥೆಯ ನಾಯಕತ್ವವು ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಹೆಚ್ಚಿನ ಜವಾಬ್ದಾರಿ ಮತ್ತು ನಿಖರತೆಯನ್ನು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
"ಊಹಾತ್ಮಕ ಅಥವಾ ಅಸಡ್ಡೆ ಹೇಳಿಕೆಗಳು ಎಂದಿಗೂ ಸ್ವೀಕಾರಾರ್ಹವಲ್ಲ. ಹಿಂದೆ ಹೇಳಿದಂತೆ, ಭಾರತದ ಇಂಧನ ಆಮದು ಭಾರತೀಯ ಗ್ರಾಹಕರಿಗೆ ಊಹಿಸಬಹುದಾದ ಮತ್ತು ಕೈಗೆಟುಕುವ ಇಂಧನ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ರಷ್ಯಾದ ತೈಲ ಖರೀದಿಗಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳು, ಮಾಸ್ಕೋದ ಮೇಲೆ "ದೊಡ್ಡ ಪರಿಣಾಮ" ಬೀರುತ್ತಿವೆ ಎಂದು ಮಾರ್ಕ್ ರುಟ್ಟೆ ಹೇಳಿದ್ದಾರೆ. ಅಲ್ಲದೇ ಇದೇ ವಿಚಾರವಾಗಿ ನರೇಂದ್ರ ಮೋದಿ ಅವರು ಪದೇ ಪದೇ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಮುಂದಿನ ರಣತಂತ್ರದ ಕುರಿತು ಪ್ರಶ್ನೆ ಕೇಳುತ್ತಿದ್ದಾರೆ ಎಂದೂ ಮಾರ್ಕ್ ರುಟ್ಟೆ ಪ್ರತಿಪಾದಿಸಿದ್ದಾರೆ.
Advertisement