
ಶ್ರೀನಗರ: ಕಾಶ್ಮೀರ ಕಣಿವೆಯೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಸಜ್ಜಾಗಿ ನಿಂತಿತ್ತು, ಅವಕಾಶಕ್ಕಾಗಿ ಕಾಯುತ್ತಿದ್ದಾರೆಂದು ಬಿಎಸ್‌ಎಫ್ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಎಫ್ ಹಿರಿಯ ಅಧಿಕಾರಿ ಅಶೋಕ್ ಯಾದವ್ ಅವರು, ಚಳಿಗಾಲ ಆರಂಭವಾಗುವ ಮೊದಲು ಕಣಿವೆಯೊಳಗೆ ಉಗ್ರರು ನುಸುಳಲು ಹೆಚ್ಚಿನ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.
ಹಿಮಪಾತ ಆರಂಭಕ್ಕೂ ಮುನ್ನ ಗಡಿ ನುಸುಳುವ ಪ್ರಯತ್ನಗಳು ನಡೆಯುತ್ತಿರುತ್ತವೆ. ನವೆಂಬರ್ ವರೆಗೂ ಉಗ್ರರ ಒಳನುಸುಳುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗಡಿ ಬಳಿ ಹೆಚ್ಚಿನ ಉಗ್ರರು ಸಜ್ಜಾಗಿ ನಿಂತಿದ್ದಾರೆಂದು ತಿಳಿಸಿದ್ದಾರೆ.
ಬಂಡಿಪೋರಾ ಮತ್ತು ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚಿನ ಉಗ್ರರು ನಿಂತಿದ್ದು, ಒಳನುಸುಳಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಭದ್ರತೆ ಬಿಗಿಯಾಗಿದ್ದು, ಭದ್ರತಾಪಡೆಗಳು ಉಗ್ರರ ಪ್ರಯತ್ನಗಳನ್ನು ವಿಫಲಗೊಳ್ಳುವಂತೆ ಮಾಡುತ್ತಿದ್ದಾರೆ. ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ಸೇನೆ ಮತ್ತು ಬಿಎಸ್‌ಎಫ್ ಜಾಗರೂಕರಾಗಿದ್ದು, ಕಣ್ಗಾವಲು ಉಪಕರಣಗಳ ಸಹಾಯದಿಂದ ಎಲ್‌ಒಸಿಯಲ್ಲಿ ಉತ್ತಮವಾಗಿ ಪ್ರಾಬಲ್ಯ ಸಾಧಿಸುತ್ತಿವೆ. ಸೇನೆಯ ಜೊತೆಗೆ ಎಲ್‌ಸಿಯಲ್ಲಿ ಉತ್ತಮ ಪ್ರಾಬಲ್ಯ ಸಾಧಿಸುತ್ತಿದ್ದೇವೆ.
ಈ ವರ್ಷ ಇಲ್ಲಿಯವರೆಗೆ ಭದ್ರತಾ ಪಡೆಗಳು ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿವೆ. ಹೊಸ ವಿಧಾನ ಮತ್ತು ಹೊಸ ಕಣ್ಗಾವಲು ಉಪಕರಣಗಳಿಂದಾಗಿ ಉಗ್ರರ ನುಸುಳುವಿಕೆ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.
Advertisement