
ಲೇಹ್/ ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿ ಜೈಲು ಸೇರಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ ಚುಕ್ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಅವರ ಪತ್ನಿ ಗೀತಾಂಜಲಿ ಆಂಗ್ಮೋ ತಳ್ಳಿಹಾಕಿದ್ದಾರೆ.
ವಾಂಗ್‌ಚುಕ್ ಅವರು ಲೇಹ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಆಂಗ್ಮೋ, "ಅತ್ಯಂತ ಗಾಂಧೀವಾದಿ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. CRPF ನ ಕ್ರಮಗಳಿಂದಾಗಿ ಸೆಪ್ಟೆಂಬರ್ 24 ಉದ್ವಿಗ್ನ ಪರಿಸ್ಥಿತಿ ಉದ್ಬವಿಸಿತು ಎಂದು ಅವರು ಹೇಳಿದ್ದಾರೆ.
ಕಳೆದ ಬುಧವಾರ ಲೇಹ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಪ್ರಾಣ ಕಳೆದುಕೊಂಡು 90 ಮಂದಿ ಗಾಯಗೊಂಡಿದ್ದರು. ಇದಾದ ಎರಡು ದಿನಗಳ ನಂತರ ಶುಕ್ರವಾರ ವಾಂಗ್‌ಚುಕ್ ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA)ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಲಡಾಖ್ ಗಾಗಿ ರಾಜ್ಯ ಸ್ಥಾನಮಾನಕ್ಕಾಗಿ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬಂಧನಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ಅವರನ್ನು ರಾಜಸ್ಥಾನದ ಜೋಧ್‌ಪುರದ ಜೈಲಿನಲ್ಲಿ ಇರಿಸಲಾಗಿದೆ.
'ಹಿಮನದಿ ನಾನು ಪಾಕಿಸ್ತಾನಕ್ಕೆ ಹರಿಯುತ್ತೇನೋ ಅಥವಾ ಭಾರತಕ್ಕೆ ಹರಿಯುತ್ತೇನೋ ಎಂದು ನೋಡುವುದಿಲ್ಲ'
ಫೋನ್‌ನಲ್ಲಿ ಸುದ್ದಿಸಂಸ್ಥೆ PTI ಜೊತೆಗೆ ಮಾತನಾಡಿದ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್ (HIAL)ಸಹ-ಸಂಸ್ಥಾಪಕಿ ಆಂಗ್ಮೋ, ತನ್ನ ಪತಿಯನ್ನು ಬಂಧಿಸಿದಾಗಿನಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಬಂಧನ ಆದೇಶದ ಪ್ರತಿಯನ್ನು ತಮಗೆ ನೀಡಿಲ್ಲ. ಅದು ಸಿಕ್ಕ ನಂತರ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸೋನಮ್ ವಾಂಗ್ ಚುಕ್ ಪಾಕ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ ಆಂಗ್ಮೋ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಆಹ್ವಾನದ ಮೇರೆಗೆ ಅವರು ವಿದೇಶಗಳಿಗೆ ತೆರಳಿದ್ದರು. ಪಾಕಿಸ್ತಾನಕ್ಕೂ ವೃತ್ತಿಪರ ಹಾಗೂ ಹವಾಮಾನ ವಿಷಯವಾಗಿ ಹೋಗಿದ್ದರು. ವಿಶ್ವಸಂಸ್ಥೆ ಆಯೋಜಿಸಿದ್ದ ಸಮ್ಮೇಳನದಲ್ಲಿ ನಾವು ಭಾಗವಹಿಸಿದ್ದೇವು. ಅದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮ್ಮೇಳನವಾಗಿತ್ತು. ಹಿಮಾಲಯದ ಮೇಲಿರುವ ಹಿಮನದಿಯು ನಾನು ಪಾಕಿಸ್ತಾನಕ್ಕೆ ಹರಿಯುತ್ತೇನೋ ಅಥವಾ ಭಾರತಕ್ಕೆ ಹರಿಯುತ್ತೇನೋ ಎಂದು ನೋಡುವುದಿಲ್ಲ ಎಂದು ಅವರು ತಿಳಿಸಿದರು.
ಫೆಬ್ರವರಿಯಲ್ಲಿ ನಡೆದ 'ಬ್ರೀತ್ ಪಾಕಿಸ್ತಾನ್' ಸಮ್ಮೇಳನವನ್ನು ವಿಶ್ವಸಂಸ್ಥೆಯ ಪಾಕಿಸ್ತಾನ ಮತ್ತು ಡಾನ್ ಮೀಡಿಯಾ ಆಯೋಜಿಸಿತ್ತು. ಬಹು ರಾಷ್ಟ್ರಗಳ ಸಹಯೋಗದಲ್ಲಿ ಅದನ್ನು ಆಯೋಜಿಸಲಾಗಿತ್ತು. ICIMOD ನಂತಹ ಸಂಸ್ಥೆಗಳು ಅದರಲ್ಲಿ ಪಾಲ್ಗೊಂಡಿದ್ದವು. ಇದು ವಿವಿಧ ವಿಷಯಗಳ ಮೇಲೆ ಕೆಲಸ ಮಾಡುತ್ತದೆ. ನಾವು ICIMOD ನ ಹಿಮಾಲಯನ್ ವಿಶ್ವವಿದ್ಯಾಲಯದ ಒಕ್ಕೂಟದ ಭಾಗವಾಗಿದ್ದೇವೆ ಎಂದು ಆಂಗ್ಮೋ ಹೇಳಿದರು.
ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) 1983 ರಲ್ಲಿ ಸ್ಥಾಪನೆಯಾದ ನೇಪಾಳ ಮೂಲದ ಸಂಸ್ಥೆಯಾಗಿದ್ದು, ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ ಎಂದು ಅವರು ತಿಳಿಸಿದರು.
ಹೇಗೆ ದೇಶವಿರೋಧಿ ಎಂದು ಬಿಂಬಿಸುತ್ತೀರಿ?
ವಾಂಗ್‌ಚುಕ್‌ನನ್ನು ದೇಶವಿರೋಧಿ ಎಂದು ಬಿಂಬಿಸುವ ಹಿಂದಿನ ವಾದವನ್ನು ಅವರು ಪ್ರಶ್ನಿಸಿದ್ದಾರೆ. ಭಾರತೀಯ ಸೇನೆಗೆ ಆಶ್ರಯ ನೀಡುವ ಮತ್ತು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಯನ್ನು ನೀವು ಹೇಗೆ ದೇಶವಿರೋಧಿ ಎಂದು ಬಿಂಬಿಸುತ್ತೀರಿ? ಎಂದು ಕೇಳಿದರು.
ತಮ್ಮ ಸಂಸ್ಥೆಗಳ ಮೇಲಿನ ಅಕ್ರಮ ಹಣಕಾಸು ವಹಿವಾಟು ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಆಂಗ್ಮೋ HIALಗೆ ವಿದೇಶಿ ದೇಣಿಗೆ, UGC ನೋಂದಣಿ, SECMOL ನ FCRA ರದ್ದತಿ ಮತ್ತು ಭೂ ಹಂಚಿಕೆಯ ಬಗ್ಗೆ ವಿವರವಾದ ದಾಖಲೆಯನ್ನು ತೋರಿಸಿದರು.
Advertisement