
ನವದೆಹಲಿ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ (Chaitanyananda Saraswati) ಪೊಲೀಸರಿಗೇ ಬೆದರಿಕೆ ಹಾಕಿದ್ದಾನೆ.
ಈ ವ್ಯಕ್ತಿ ಬಂಧನದಿಂದ ತಪ್ಪಿಸಿಕೊಳ್ಳಲು ಕಳೆದ 40 ದಿನಗಳಲ್ಲಿ 13 ಹೋಟೇಲ್‌ಗಳನ್ನು ಬದಲಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸಾಮಾನ್ಯ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಸ್ವಾಮೀಜಿ ಸಣ್ಣ ಸಣ್ಣ ಹೋಟೇಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ ತನಿಖೆಗೆ ಸಹಕರಿಸುತ್ತಿಲ್ಲ, ಯಾವುದೇ ಪ್ರಶ್ನೆ ಕೇಳಿದ್ರೂ ಗೊತ್ತಿಲ್ಲ ಎಂಬ ಉತ್ತರವನ್ನಷ್ಟೇ ನೀಡುತ್ತಿದ್ದು ವಿಚಾರಣೆ ವೇಳೆ ನನಗೆ ಪ್ರಧಾನಿ ನರೇಂದ್ರ ಮೋದಿ ಗೊತ್ತು, ಪ್ರಧಾನಿ ಕಚೇರಿ ಜೊತೆಗೆ ನೇರ ಸಂಪರ್ಕ ಹೊಂದಿದ್ದೇನೆ ಎಂದು ಪೊಲೀಸರನ್ನೇ ಬೆದರಿಸುವ ಪ್ರಯತ್ನ ಮಾಡಿದ್ದಾನೆ.
ತನಿಖೆಯ ವೇಳೆ ಆರೋಪಿಯ ಕೊಠಡಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಛಾಯಾಚಿತ್ರಗಳು ಕಂಡುಬಂದಿವೆ, ಪ್ರಾಥಮಿಕ ತನಿಖೆಯಲ್ಲಿ ಈ ಚಿತ್ರಗಳನ್ನು AI ಬಳಸಿ ರಚಿಸಲಾಗಿದೆ ಎಂಬುದು ತಿಳಿದುಬಂದಿದೆ. ನಕಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಸಹ ಪೊಲೀಸರು ಪತ್ತೆಹಚ್ಚಿದ್ದು, ವಿಶ್ವಸಂಸ್ಥೆ ಮತ್ತು ಬ್ರಿಕ್ಸ್ ಜೊತೆಗಿನ ಆತನ ಸಂಬಂಧ ತೋರಿಸುವಂತೆ ಮುದ್ರಿಸಲಾಗಿದೆ.
ಅವುಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ವಾಮೀಜಿ ಬಳಿಯಿದ್ದ ಒಂದು ಐಪ್ಯಾಡ್ ಮತ್ತು ಮೂರು ಮೊಬೈಲ್ ಫೋನ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ. ಒಂದು ಫೋನ್‌ನಲ್ಲಿ ಹಾಸ್ಟೆಲ್‌ನ ಸಿಸಿಟಿವಿ ವಿಡಿಯೋಗಳು ಪತ್ತೆಯಾಗಿದೆ. ಮೂಬೈಲ್ ಮೂಲಕ ಹಾಸ್ಟೆಲ್ ಮೇಲೆ ನಿಗಾ ವಹಿಸುತ್ತಿದ್ದರು ಎನ್ನಲಾಗಿದೆ. ಸ್ವಾಮೀಜಿಗೆ ಸಂಬಂಧಿಸಿದ ಬಹು ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳಲ್ಲಿ ಇರಿಸಲಾಗಿದ್ದ 8 ಕೋಟಿ ರೂ.ಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Advertisement