
ಲೇಹ್: ಲಡಾಖ್‌ನಲ್ಲಿ ಸಾಮಾನ್ಯ ಸ್ಥಿತಿ ಮರಳುವವರೆಗೆ ಗೃಹ ಸಚಿವಾಲಯದ ಉನ್ನತ ಮಟ್ಟದ ಸಮಿತಿಯೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಲೇಹ್ ಅಪೆಕ್ಸ್ ಸಂಸ್ಥೆ ಸೋಮವಾರ ಘೋಷಿಸಿದೆ.
"ಲಡಾಖ್‌ನಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶಾಂತಿ ಪುನಃಸ್ಥಾಪಿಸುವವರೆಗೆ ನಾವು ಯಾವುದೇ ಮಾತುಕತೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಧರಿಸಿದ್ದೇವೆ" ಎಂದು ಲೇಹ್ ಅಪೆಕ್ಸ್ ಸಂಸ್ಥೆಯ ಅಧ್ಯಕ್ಷ ಥುಪ್ಸ್ತಾನ್ ಚೆವಾಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಅಲ್ಲಿರುವ ಭಯ, ದುಃಖ ಮತ್ತು ಕೋಪದ ವಾತಾವರಣವನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುವಂತೆ ನಾವು ಗೃಹ ಸಚಿವಾಲಯ, ಲಡಾಖ್ ಆಡಳಿತವನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.
ಹಿಂಸಾಚಾರದ ನಂತರ ಬಂಧಿಸಲ್ಪಟ್ಟ ಹೋರಾಟಗಾರ ಸೋನಮ್ ವಾಂಗ್‌ಚುಕ್ ಮತ್ತು ಇತರರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್(ಕೆಡಿಎ) ಸೋಮವಾರ ಒತ್ತಾಯಿಸಿದೆ.
ಲಡಾಖ್ ರಾಜ್ಯತ್ವ ಮತ್ತು ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿರುವುದು ಹಿಮಾಲಯ ಪ್ರದೇಶದ ಜನರನ್ನು "ದೂರ ತಳ್ಳಿದಂತೆ" ಎಂದು ಕೆಡಿಎ ಹೇಳಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಡಿಎ ಸದಸ್ಯ ಸಜ್ಜದ್ ಕಾರ್ಗಿಲಿ, ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿ, ಜೋಧ್‌ಪುರ ಜೈಲಿನಲ್ಲಿ ಇರಿಸಲಾಗಿರುವ ವಾಂಗ್‌ಚುಕ್ ಮತ್ತು ಲೇಹ್‌ನಲ್ಲಿ ಬಂಧಿಸಲ್ಪಟ್ಟ ಇತರ ಯುವ ನಾಯಕರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
Advertisement