

ನವದೆಹಲಿ: ಇತ್ತೀಚೆಗೆ ಜನ ಧಾರ್ಮಿಕ ಭಕ್ತಿಯ ಹೆಸರಿನಲ್ಲಿ ನಾನಾ ರೀತಿಯ ಸಾಹಸಕ್ಕೆ ಮುಂದಾಗುತ್ತಿದ್ದು, ಪರಿಸರಕ್ಕೂ ಹಾನಿ ಮಾಡುತ್ತಿದ್ದಾರೆ.
ಮಧ್ಯಪ್ರದೇಶದ ಸೆಹೋರ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ನರ್ಮದಾ ನದಿಗೆ ಸುಮಾರು 11 ಸಾವಿರ ಲೀಟರ್ ಹಾಲು ಸುರಿದ ಬೆನ್ನಲ್ಲೇ ಈಗ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಗಂಗಾ ನದಿಗೆ ಬರೋಬ್ಬರಿ 165 ಲೀಟರ್ ತುಪ್ಪವನ್ನು ಸುರಿದಿದ್ದಾರೆ. ಇದು ಪರಿಸರವಾದಿಗಳು ಮತ್ತು ನೆಟ್ಟಿಗರಿಂದ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಒಂದು ಧಾರ್ಮಿಕ ಆಚರಣೆಯ ಸಮಯದಲ್ಲಿ ಭಕ್ತರು 165 ಲೀಟರ್‌ಗಿಂತ ಹೆಚ್ಚು ದೇಸಿ ತುಪ್ಪವನ್ನು ಗಂಗಾ ನದಿಗೆ ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ಭಾರೀ ವೈರಲ್ ಆಗಿದೆ.
ಧಾರ್ಮಿಕ ಆಚರಣೆಯ ಭಾಗವಾಗಿ ನಡೆಸಲಾದ ಈ ಕೃತ್ಯವು ನದಿ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ನದಿಯ ದಂಡೆಯಲ್ಲಿ ನೀರಿನ ಹತ್ತಿರ ನಿಂತು ತುಪ್ಪ ತುಂಬಿದ ಲೋಹದ ಡಬ್ಬಿಯಿಂದ ನಿಧಾನವಾಗಿ ತುಪ್ಪವನ್ನು ನದಿಗೆ ಸುರಿಯುತ್ತಿದ್ದಾರೆ. ಇದಾದ ನಂತರ ಅಲ್ಲಿ ನಿಂತಿದ್ದ ಕೆಲವು ಜನರು ತುಪ್ಪ ತುಂಬಿಸಿಕೊಂಡು ದೋಣಿಯ ಮೂಲಕ ನದಿಯ ಮಧ್ಯಭಾಗಕ್ಕೆ ಹೋಗುತ್ತಾರೆ. ಅಲ್ಲಿ ಒಬ್ಬೊಬ್ಬರಾಗಿ ಸಾಲಾಗಿ ನಿಂತು ಪಾತ್ರೆಯಲ್ಲಿದ್ದ ತುಪ್ಪವನ್ನು ಸುರಿಯುತ್ತಾರೆ.
ತುಪ್ಪದ ಸಾಂದ್ರತೆಯು ನೀರಿಗಿಂತ ಕಡಿಮೆ ಯಾಗಿದೆ, ಆದ್ದರಿಂದ ಅದು ನೀರಿನ ಮೇಲೆ ಪದರವಾಗಿ ನಿಲ್ಲುತ್ತದೆ. ಕೊಳಚೆನೀರು ಮತ್ತು ಕಸವನ್ನು ಎಸೆದ ನಂತರ ಸಮುದ್ರ ಜೀವಿಗಳಿಗೆ ಇದು ಅಪಾಯವನ್ನುಂಟುಮಾಡುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಮತ್ತೊಬ್ಬರು ಧಾರ್ಮಿಕ ಆಚರಣೆಯ ಭಾಗವಾಗಿ ಜನರು ಈ ರೀತಿ ತುಪ್ಪವನ್ನು ವ್ಯರ್ಥ ಮಾಡುವುದು ತಪ್ಪು. ನೀರಿನಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳಿಗೆ ಇದರಿಂದ ಸಮಸ್ಯೆಯಾಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
Advertisement