

ನವದೆಹಲಿ: ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದ ಮತದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೇ ಸ್ವೀಕರಿಸಲು ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಅವರನ್ನು ಒಳಗೊಂಡಿರುವ ದ್ವಿಸದಸ್ಯರ ಪೀಠ, ಅಸಮಾಧಾನಗೊಂಡ ಪಕ್ಷಗಳಿಗೆ ಈಗಾಗಲೇ ಸ್ಥಾಪಿತವಾಗಿರುವ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ಸೂಚಿಸಿದೆ. ಈ ಅರ್ಜಿಯನ್ನು “ಅಕಾಲಿಕ” ಎಂದು ಅಭಿಪ್ರಾಯಪಟ್ಟಿದೆ.
“ಅರ್ಜಿದಾರರು (ಕ್ವರೈಶಾ ಯಾಸ್ಮಿನ್ ಮತ್ತು ಇತರರು) ಈಗಾಗಲೇ ಅಪೀಲು ನ್ಯಾಯಮಂಡಳಿಗಳ ಮೊರೆ ಹೋಗಿರುವುದರಿಂದ, ನಮ್ಮ ಅಭಿಪ್ರಾಯದಲ್ಲಿ ಅರ್ಜಿಯಲ್ಲಿ ವ್ಯಕ್ತಪಡಿಸಿರುವ ಆತಂಕಗಳು ಅಕಾಲಿಕವಾಗಿದೆ. ಈ ಅರ್ಜಿಯನ್ನು ಅನುಮೋದಿಸಿದರೆ, ಅಗತ್ಯವಾದ ಪರಿಣಾಮಗಳು ಸ್ವಯಂಪ್ರೇರಿತವಾಗಿ ಉಂಟಾಗುತ್ತವೆ,” ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದ್ದು, ಅರ್ಜಿಯ ತಾತ್ವಿಕ ಅಂಶಗಳ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿವಾದಾತ್ಮಕ SIR ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಸುಮಾರು 34 ಲಕ್ಷ ಮನವಿಗಳು ಪ್ರಸ್ತುತ ವಿವಿಧ ನ್ಯಾಯಮಂಡಳಿಗಳ ಮುಂದೆ ಬಾಕಿ ಇವೆ. ಈ ಅರ್ಜಿಗಳನ್ನು ತೀರ್ಮಾನಿಸಲು, ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ 19 ನ್ಯಾಯಮಂಡಳಿಗಳನ್ನು ರಚಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದ 13 ಮಂದಿ ಮತದಾರರ ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ, ಚುನಾವಣಾ ಆಯೋಗ ಕಾನೂನುಬದ್ಧ ವಿಧಾನಗಳನ್ನು ಅನುಸರಿಸದೆ, ತುರ್ತುವಾಗಿ ಹೆಸರುಗಳನ್ನು ಅಳಿಸುತ್ತಿದೆ ಮತ್ತು ಆ ಪ್ರಕ್ರಿಯೆಗಳ ವಿರುದ್ಧ ಸಲ್ಲಿಸಲಾದ ಮನವಿಗಳನ್ನು ಸಮಯಕ್ಕೆ ಸರಿಯಾಗಿ ವಿಚಾರಣೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ಡಿ. ಎಸ್. ನಾಯ್ಡು ಅವರು, ಪ್ರಸ್ತುತ 30 ರಿಂದ 34 ಲಕ್ಷ ಅಪೀಲುಗಳು ವಿವಿಧ ನ್ಯಾಯಮಂಡಳಿಗಳ ಮುಂದೆ ಬಾಕಿ ಇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. “ಪ್ರತಿ ನ್ಯಾಯಮಂಡಳಿಯೂ ಈಗ ಒಂದು ಲಕ್ಷಕ್ಕಿಂತ ಹೆಚ್ಚು ಅಪೀಲುಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿಯಲ್ಲಿದೆ,” ಎಂದು ಪೀಠ ಗಮನಿಸಿದೆ. ಅರ್ಜಿದಾರರ ಪರ ವಕೀಲರು, ಚುನಾವಣಾ ಆಯೋಗ ಅಗತ್ಯ ಆದೇಶಗಳನ್ನು ಸಂಬಂಧಿತ ನ್ಯಾಯಾಂಗ ಅಧಿಕಾರಿಗಳ ಮುಂದೆ ಮಂಡಿಸಲು ವಿಫಲವಾಗಿದೆ ಮತ್ತು ಮತದಾರರ ಪಟ್ಟಿಯ ‘ಫ್ರೀಜಿಂಗ್ ದಿನಾಂಕ’ವನ್ನು ವಿಸ್ತರಿಸಬೇಕಾಗಿದೆ ಎಂದು ವಾದಿಸಿದರು.
“ನನಗೆ ವಾದಿಸಲು ಅವಕಾಶ ಕೊಡದಿದ್ದರೆ, ಅದರ ಪ್ರಯೋಜನವೇನು? ಈ ಮೇಲ್ಮನವಿ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ತೀರ್ಮಾನಿಸುತ್ತಾರೆಯೇ, ಇಲ್ಲವೇ ಅವನ್ನು ಹೀಗೆ ಮುಂದೂಡುತ್ತಲೇ ಇರುತ್ತಾರೆಯೇ?” ಎಂದು ವಕೀಲರು ಪ್ರಶ್ನಿಸಿದರು.
ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು ಚುನಾವಣಾ ಪ್ರಕ್ರಿಯೆಯ ಪವಿತ್ರತೆಯನ್ನು ಉಲ್ಲೇಖಿಸಿ, ಮತದಾನದ ಹಕ್ಕು ಕೇವಲ ಸಂವಿಧಾನಾತ್ಮಕ ವಿಧಿ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ “ಭಾವನಾತ್ಮಕ” ಆಧಾರಸ್ತಂಭವೂ ಆಗಿದೆ ಎಂದು ಹೇಳಿದರು. “ನೀವು ಹುಟ್ಟಿದ ದೇಶದಲ್ಲಿ ಮತದಾನ ಮಾಡುವ ಹಕ್ಕು ಕೇವಲ ಸಂವಿಧಾನಾತ್ಮಕ ಹಕ್ಕು ಮಾತ್ರವಲ್ಲ, ಅದು ಭಾವನಾತ್ಮಕವೂ ಹೌದು. ಅದು ಪ್ರಜಾಪ್ರಭುತ್ವದ ಭಾಗವಾಗಿರುವುದು ಮತ್ತು ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳುವುದರ ಕುರಿತದ್ದಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ಆದರೆ, ಮಾಜಿ ನ್ಯಾಯಾಧೀಶರು ಅಧ್ಯಕ್ಷತೆ ವಹಿಸಿರುವ ಟ್ರೈಬ್ಯುನಲ್‌ಗಳಿಗೆ ತೀರ್ಪುಗಳನ್ನು ನೀಡಲು ಕಟ್ಟುನಿಟ್ಟಿನ ಅವಧಿ ನಿಗದಿ ಮಾಡಿ ಅವುಗಳ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಇಲ್ಲಿ ಗುರಿ ಸಾಧಿಸಲು ಯಾವುದೇ ಮಾರ್ಗ ಸರಿ ಎಂಬುದಲ್ಲ, ಬದಲಾಗಿ ಸರಿಯಾದ ಮಾರ್ಗವೇ ಗುರಿಯನ್ನು ನ್ಯಾಯಸಮ್ಮತವಾಗಿಸುತ್ತದೆ,” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.
“ನಾವು ನ್ಯಾಯಸಮ್ಮತ ಪ್ರಕ್ರಿಯೆಯ ಹಕ್ಕುಗಳನ್ನು ಕಾಪಾಡಬೇಕು. ಮತದಾರನು ಎರಡು ಸಂವಿಧಾನಿಕ ಪ್ರಾಧಿಕಾರಗಳ ನಡುವೆ ಸಿಲುಕಿಕೊಳ್ಳುವಂತಾಗಬಾರದು,” ಎಂದು ಅವರು ಹೇಳಿ, ಈ ಹಂತದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಡೆಹಿಡಿಯುವುದಿಲ್ಲ ಎಂದು ಸೇರಿಸಿದರು.
ಕೊಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮೇಲ್ಮನವಿ ವಿಚಾರಣೆಗಾಗಿ ವಿಧಾನ ಮತ್ತು ಕ್ರಮವನ್ನು ಈಗಾಗಲೇ ರೂಪಿಸಿದ್ದು, ಅದು ಸೋಮವಾರದಿಂದ ಜಾರಿಯಲ್ಲಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಗಮನಿಸಿದರು. “"ಅಗಾಧ ಸಂಖ್ಯೆಯ ಮತದಾರರನ್ನು ಹೊರಗಿಡುವವರೆಗೆ ಅಥವಾ ಅದು ಚುನಾವಣೆಯ ಮೇಲೆ ಗಣನೀಯವಾಗಿ ಪರಿಣಾಮ ಬೀರುವವರೆಗೆ... ಚುನಾವಣೆಯನ್ನು ರದ್ದುಗೊಳಿಸಲಾಗುವುದಿಲ್ಲ" ಎಂದು ಪೀಠ ಹೇಳಿದೆ. ನ್ಯಾಯಾಂಗ ಹಸ್ತಕ್ಷೇಪ "ಚುನಾವಣೆಗಳನ್ನು ಉತ್ತೇಜಿಸಲು, ಅವುಗಳನ್ನು ನಿಷೇಧಿಸಲು ಅಲ್ಲ" ಎಂದು ಹೇಳಿದರು.
ನ್ಯಾಯಾಂಗದ ಹಸ್ತಕ್ಷೇಪದ ಉದ್ದೇಶ “ಚುನಾವಣೆಯನ್ನು ಉತ್ತೇಜಿಸುವುದು, ತಡೆಯುವುದು ಅಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರು ಮೊದಲು ಮೇಲ್ಮನವಿ ಟ್ರೈಬ್ಯುನಲ್‌ಗಳ ಮುಂದೆ ಲಭ್ಯವಿರುವ ಎಲ್ಲಾ ಪರಿಹಾರ ಮಾರ್ಗಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
Advertisement