

ಜಾರಿ ನಿರ್ದೇಶನಾಲಯ (Enforcement directorate) ಇಂದು ಬುಧವಾರ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (AAP) ರಾಜಸಭಾ ಸದಸ್ಯ ಅಶೋಕ್ ಮಿತ್ತಲ್ ಅವರಿಗೆ ಸಂಬಂಧಿಸಿದ ವ್ಯಾಪಾರ ಸಂಸ್ಥೆಗಳ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ತನಿಖೆಯ ಭಾಗವಾಗಿ ಶೋಧ ಕಾರ್ಯಾಚರಣೆ ನಡೆಸಿತು. ಇತ್ತೀಚೆಗೆ ಅವರು ಪಕ್ಷದ ರಾಜಸಭಾ ಉಪ ನಾಯಕನಾಗಿ ರಾಘವ್ ಚಡ್ಡಾ ಸ್ಥಾನಕ್ಕೆ ನೇಮಕಗೊಂಡಿದ್ದರು.
61 ವರ್ಷದ ಉದ್ಯಮಿ ಹಾಗೂ ಶಿಕ್ಷಣತಜ್ಞರಾದ ಮಿತ್ತಲ್, ಲವ್ಲಿ ಗ್ರೂಪ್‌ನ ಮುಖ್ಯಸ್ಥರಾಗಿದ್ದು, ಫಗ್ವಾರಾದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ ಕುಲಪತಿಯಾಗಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ಪ್ರಕಾರ, ಜಲಂಧರ್ ಮತ್ತು ಫಗ್ವಾರಾದಲ್ಲಿರುವ ಮಿತ್ತಲ್ ಅವರ ವ್ಯಾಪಾರ ಹಿತಾಸಕ್ತಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳ ಜೊತೆಗೆ ಇನ್ನಿತರ ಪ್ರದೇಶಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಈ ಕ್ರಮವನ್ನು FEMA ಕಾಯ್ದೆಯ ವಿಧಿಗಳ ಅಡಿಯಲ್ಲಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷ, ಎಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಣೆ ನೀಡಿದ್ದು, ಇದು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವ ಕೇಂದ್ರ ಸರ್ಕಾರದ ಕ್ರಮಗಳ ಭಾಗವಾಗಿದೆ ಎಂದು ಆರೋಪಿಸಿದೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎನ್ ಡಿಎ ಈ ದಾಳಿ ಮಾಡಿದೆ. ರಾಜಕೀಯವಾಗಿ ಎದುರಿಸಲು ಬದಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದೆ.
ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿ ಪಂಜಾಬ್ ಚುನಾವಣೆಗೆ ಸಿದ್ಧತೆ ಆರಂಭಿಸಿದೆ ಎಂದು ಹೇಳಿ, ರಾಜ್ಯದ ಜನರು ತಕ್ಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಎಚ್ಚರಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಈ ದಾಳಿ ಖಂಡಿಸಿ, ಬಿಜೆಪಿ ಚುನಾವಣಾ ಸಿದ್ಧತೆ ಆರಂಭಿಸಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಪಂಜಾಬ್ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಆಪ್ ರಾಜಸಭಾ ಸದಸ್ಯ ಅಶೋಕ್ ಮಿತ್ತಲ್ ಅವರ ಮನೆ ಮತ್ತು ವಿಶ್ವವಿದ್ಯಾಲಯದ ಮೇಲೆ ಇಡಿ ದಾಳಿ… ಇದು ಸಾಮಾನ್ಯ ಮೋದಿ ಶೈಲಿ,” ಎಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ನಾವು ಕೊಂಬೆಗಳಿಂದ ಬಿದ್ದು ಹೋಗುವ ಎಲೆಗಳಲ್ಲ; ಬಿರುಗಾಳಿಗಳು ತಮ್ಮ ಮಿತಿಯಲ್ಲಿ ಇರಲಿ ಎಂಬ ಅರ್ಥದ ಕವನವನ್ನೂ ಉಲ್ಲೇಖಿಸಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.
Advertisement