

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆಯಿತು.
ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಇಂದು ಲೋಕಸಭೆಯಲ್ಲಿ ಅಖಿಲೇಶ್ ಯಾದವ್ ಒತ್ತಾಯಿಸಿದರು. ಜೊತೆಗೆ, ಜನಗಣತಿ ಪೂರ್ಣಗೊಳ್ಳುವವರೆಗೆ ಸರ್ಕಾರ ಏಕೆ ಕಾಯುವುದಿಲ್ಲ ಎಂದು ಪ್ರಶ್ನಿಸಿ, ತಮ್ಮ ಪಕ್ಷ ಜಾತಿ ಜನಗಣತಿ ಮಾಡಬೇಕೆಂದು (caste census) ಒತ್ತಾಯಿಸುತ್ತದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ಜನಗಣತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಹೌಸ್‌ಲಿಸ್ಟಿಂಗ್ ಕಾರ್ಯ ನಡೆಯುತ್ತಿದ್ದು, ಜನಗಣತಿ ವೇಳೆ ಜಾತಿ ಕಾಲಮ್ ಸೇರಿಸಲಾಗುತ್ತದೆ ಎಂದು ಹೇಳಿದರು.
ಧರ್ಮ ಆಧಾರಿತ ಮೀಸಲಾತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ ಅಮಿತ್ ಶಾ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನಬಾಹಿರ ಎಂದು ಹೇಳಿದರು.
ಸಮಾಜವಾದಿ ಪಕ್ಷದ ವಿರುದ್ಧ ಈ ಸಂದರ್ಭದಲ್ಲಿ ಟೀಕೆ ಮಾಡಿದ ಅಮಿತ್ ಶಾ, ಧರ್ಮ ಆಧಾರಿತವಾಗಿ ಮುಸ್ಲಿಂ ಮಹಿಳೆಯರಿಗೆ ಟಿಕೆಟ್ ಕೇಳುವ ನೀವು ಹಾಗಾದರೆ ನಿಮ್ಮ ಪಕ್ಷದ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಬಹುದು, ಅದರಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ ಎಂದು ವ್ಯಂಗ್ಯಭರಿತವಾಗಿ ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ಅಖಿಲೇಶ್ ಯಾದವ್, ಗೃಹ ಸಚಿವರ ಹೇಳಿಕೆಯನ್ನು ಅಪ್ರಜಾಪ್ರಭುತ್ವದ ಎಂದು ಕರೆದರು. ಮುಸ್ಲಿಂ ಮಹಿಳೆಯರು ಈ ದೇಶದ ಜನಸಂಖ್ಯೆಯ ಭಾಗವಲ್ಲವೇ ಎಂದು ಪ್ರಶ್ನಿಸಿದರು.
ಈ ಚರ್ಚೆಯಲ್ಲಿ ಜಾತಿ ಜನಗಣತಿಯ ವಿಚಾರವೂ ಪ್ರಮುಖವಾಗಿ ಹೊರಹೊಮ್ಮಿದ್ದು, ಸರ್ಕಾರ ಈ ಪ್ರಕ್ರಿಯೆಯನ್ನು ಆರಂಭಿಸಿದೆ. ಅದರಲ್ಲೂ ಜಾತಿ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದು ಅಮಿತ್ ಶಾ ಪುನರುಚ್ಛರಿಸಿದರು.
ಮಸೂದೆಗಳನ್ನು ಇಷ್ಟು ತುರ್ತಾಗಿ ಏಕೆ ತರುತ್ತೀರಿ ಎಂದು ಪ್ರಶ್ನಿಸಿದ ಅಖಿಲೇಶ್ ಯಾದವ್, ನಾವು ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತೇವೆ, ಆದರೆ ಜನಗಣತಿ ನಡೆಯಲು ಏಕೆ ಕಾಯುವುದಿಲ್ಲ ಎಂದು ಕೇಳಿದರು.
Advertisement