

ಮುಂಬೈ: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳ ಕುಟುಂಬ, ತಮ್ಮ ಮಕ್ಕಳ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇದೊಂದು ದೊಡ್ಡ ಪಿತೂರಿ ಮತ್ತು ನಾಸಿಕ್‌ನ ಸ್ವಯಂ ಘೋಷಿತ 'ದೇವಮಾನವ' ಅಶೋಕ್ ಖರತ್ ಅವರ ಲೈಂಗಿಕ ದೌರ್ಜನ್ಯ ಹಾಗೂ ಸೆಕ್ಸ್ ವಿಡಿಯೋ ಪ್ರಕರಣದಿಂದ ಗಮನ ಬೇರೆಡೆ ಸೆಳೆಯಲು ಈ ಪ್ರಕರಣವನ್ನು ಸೃಷ್ಟಿಸಲಾಗಿದೆ ಎಂದು TCS ಲವ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ನಿದಾ ಖಾನ್ ಕುಟುಂಬ ಆರೋಪಿಸಿದೆ.
ಆರೋಪಿ ಕುಟುಂಬ ಸದಸ್ಯರು, ಇದೊಂದು ದೊಡ್ಡ ಪಿತೂರಿ ಎಂದು ಆರೋಪಿಸಿದ್ದಾರೆ ಮತ್ತು ತಮ್ಮ ಮಕ್ಕಳನ್ನು ಸುಳ್ಳು ಹಾಗೂ ರಾಜಕೀಯ ಪ್ರೇರಿತ ಪ್ರಕರಣಗಳ ಮೂಲಕ ಬಂಧಿಸಲು ಸಂಘಟಿತ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ.
ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಈ ಪ್ರಕರಣ ಸೃಷ್ಟಿಸಲಾಗಿದೆ. ಅಶೋಕ್ ಖರತ್ ಪ್ರಕರಣದಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಅಧಿಕಾರಶಾಹಿ ವಲಯದ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಹತ್ವಾಕಾಂಕ್ಷಿ ಯುವಕರ ಮಾನಹಾನಿ ಮಾಡಲು ಪೂರ್ವ ಯೋಜಿತ ಪಿತೂರಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ ಬಲವಂತದ ಮತಾಂತರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿದಾ ಖಾನ್ ಕೂಡ ತನ್ನ ಕುಟುಂಬದ ಮೂಲಕ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ತನ್ನ ಮಗಳ ವಿರುದ್ಧದ ಆರೋಪಗಳು ಕಟ್ಟುಕಥೆಯಾಗಿದ್ದು, ಪ್ರಕರಣವನ್ನು ತಿರುಚಲಾಗಿದೆ ಎಂದು ನಿದಾ ಖಾನ್ ತಂದೆ ಹೇಳಿದ್ದಾರೆ.
ನಿದಾ ಖಾನ್ ಅವರನ್ನು ಟಿಸಿಎಸ್ ನಾಸಿಕ್ ಘಟಕದ ಮಾನವ ಸಂಪನ್ಮೂಲ ಮುಖ್ಯಸ್ಥೆ ಎಂದು ವಿವರಿಸಿದ ಹಿಂದಿನ ವರದಿಗಳು ತಪ್ಪು. ಅವರು ಅಂತಹ ದೊಡ್ಡ ಹುದ್ದೆಯನ್ನು ಹೊಂದಿಲ್ಲ ಅಥವಾ ಸಂಸ್ಥೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿಲ್ಲ ಎಂದು ಟಿಸಿಎಸ್ ಸ್ವತಃ ಸ್ಪಷ್ಟಪಡಿಸಿದೆ ಎಂದು ಅವರು ತಿಳಿಸಿದರು.
"ಇದು ಅವರ ಮಗಳ ವಿರುದ್ಧದ ಸುಳ್ಳು ಪ್ರಚಾರವಾಗಿದೆ. ಸರ್ಕಾರ ಮತ್ತು ಅದರ ವರ್ಚಸ್ಸಿಗೆ ಹಾನಿಕಾರಕವಾದ ಇತರ ವಿಷಯಗಳನ್ನು ಮುಚ್ಚಿಹಾಕಲು ನಿದಾ ವಿರುದ್ಧದ ಪ್ರಕರಣವನ್ನು ಸೃಷ್ಟಿಸಲಾಗಿದೆ” ಎಂದು ಅವರ ತಂದೆ ಹೇಳಿದ್ದಾರೆ.
Advertisement