

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಸುಮಾರು 23 ಶೇಕಡಾ ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ. ಹಾಗೆಯೇ 22 ಶೇಕಡಾ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.
ಈ ವರದಿಯಲ್ಲಿ 1,445 ಅಭ್ಯರ್ಥಿಗಳನ್ನು ವಿಶ್ಲೇಷಿಸಲಾಗಿದ್ದು, ಅವರಲ್ಲಿ 338 ಮಂದಿ (23 ಶೇಕಡಾ) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ. 295 ಮಂದಿ (20ಶೇಕಡಾ) ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಇದಲ್ಲದೆ, 16 ಅಭ್ಯರ್ಥಿಗಳು ಕೊಲೆ ಆರೋಪಗಳನ್ನು ಹೊಂದಿದ್ದಾರೆ ಎಂದು ಘೋಷಿಸಿದ್ದು, 80 ಮಂದಿ ಕೊಲೆ ಯತ್ನ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಬಿಜೆಪಿ ಪಕ್ಷದ 141 ಅಭ್ಯರ್ಥಿಗಳಲ್ಲಿ 102 ಮಂದಿ (72 ಶೇಕಡಾ), ತೃಣಮೂಲ ಕಾಂಗ್ರೆಸ್ (TMC) ಪಕ್ಷದ 142ರಲ್ಲಿ 49 ಮಂದಿ (35 ಶೇಕಡಾ), ಸಿಪಿಐ(ಎಂ) ಪಕ್ಷದ 100ರಲ್ಲಿ 51 ಮಂದಿ (51 ಶೇಕಡಾ) ಹಾಗೂ ಕಾಂಗ್ರೆಸ್ ಪಕ್ಷದ 142ರಲ್ಲಿ 37 ಮಂದಿ (26 ಶೇಕಡಾ) ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ. 142 ಕ್ಷೇತ್ರಗಳಲ್ಲಿ 63 (44 ಶೇಕಡಾ) ಕ್ಷೇತ್ರಗಳು “ರೆಡ್ ಅಲರ್ಟ್” ಕ್ಷೇತ್ರಗಳಾಗಿದ್ದು, ಅಲ್ಲಿ ಮೂರು ಅಥವಾ ಹೆಚ್ಚು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.
ಆಸ್ತಿ ವಿವರ ಘೋಷಣೆ
ಒಟ್ಟು 1,445 ಅಭ್ಯರ್ಥಿಗಳಲ್ಲಿ 321 ಮಂದಿ (22 ಶೇಕಡಾ)ಕೋಟ್ಯಾಧಿಪತಿಗಳಾಗಿದ್ದಾರೆ.
ಟಿಎಂಸಿ ಪಕ್ಷದ 142 ಅಭ್ಯರ್ಥಿಗಳಲ್ಲಿ 103 ಮಂದಿ (73 ಶೇಕಡಾ), ಬಿಜೆಪಿ ಪಕ್ಷದ 141ರಲ್ಲಿ 73 ಮಂದಿ (52 ಶೇಕಡಾ), ಕಾಂಗ್ರೆಸ್ ಪಕ್ಷದ 142ರಲ್ಲಿ 36 ಮಂದಿ (25 ಶೇಕಡಾ) ಹಾಗೂ ಸಿಪಿಐ(ಎಂ) ಪಕ್ಷದ 100ರಲ್ಲಿ 33 ಮಂದಿ (33 ಶೇಕಡಾ) ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ADR ವರದಿ ಹೇಳಿದೆ.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 1.21 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ವರದಿ ತಿಳಿಸಿದೆ.
ಸರಾಸರಿ ಆಸ್ತಿ ಮೌಲ್ಯವು ಈ ಕೆಳಗಿನಂತಿದೆ: ಟಿಎಂಸಿ ಅಭ್ಯರ್ಥಿಗಳದ್ದು 5.05 ಕೋಟಿ ರೂಪಾಯಿ, ಬಿಜೆಪಿ ಅಭ್ಯರ್ಥಿಗಳದ್ದು 3.28 ಕೋಟಿ ರೂಪಾಯಿ ಸಿಪಿಐ(ಎಂ) ಅಭ್ಯರ್ಥಿಗಳದ್ದು 1.22 ಕೋಟಿ ರೂಪಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳದ್ದು 1.04 ಕೋಟಿ ರೂಪಾಯಿಗಳಷ್ಟಾಗಿದೆ.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಎರಡು ಹಂತಗಳಲ್ಲಿ ಇದೇ ಏಪ್ರಿಲ್ 23 ಮತ್ತು 29ರಂದು ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
Advertisement