

ಕೃಷ್ಣನಗರ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸಿದ ಜನರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುರುವಾರ ಅಭಿನಂದಿಸಿದರು. ಈ ಮತದಾನದ ಪ್ರಮಾಣವು ಬದಲಾವಣೆಗೆ ಭಾರೀ ಜನಮತವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಇಂದು ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 50 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಈ ಬಾರಿ ಹಿಂಸಾಚಾರ ಅತ್ಯಲ್ಪ ಮಟ್ಟದಲ್ಲಿದೆ ಎಂದು ಹೇಳಿದರು. ಬಂಗಾಳದ ಕಳೆದ 50 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಈ ಬಾರಿ ಹಿಂಸಾಚಾರ ಕನಿಷ್ಠ ಮಟ್ಟದಲ್ಲಿತ್ತು. ನನಗೆ ಬಂದ ಮಾಹಿತಿಯ ಆಧಾರದ ಮೇಲೆ, ಇದು ಬದಲಾವಣೆಗೆ ಜನಮತವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದಾಗಲೆಲ್ಲ ಈ ಹಿಂದೆ ಬಿಜೆಪಿ ಸ್ಪಷ್ಟ ಜಯಗಳಿಸಿದೆ ಎಂದು ಅವರು ಹೇಳಿಕೊಂಡರು. ಇಂದು ಮಧ್ಯಾಹ್ನ 1 ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ ಸರಾಸರಿ 62.18 ಶೇಕಡಾ ಮತದಾನ ದಾಖಲಾಗಿದೆ. 152 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಆರಂಭಿಕ ಗಂಟೆಗಳಲ್ಲಿ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದ ಹಿಂಸಾಚಾರದ ಘಟನೆಗಳು ವರದಿಯಾಗಿವೆ.
ಜಲ್ಮುರಿ ಸೇವನೆ
ಜಲ್ಮುರಿ ಘಟನೆ ಕುರಿತು ಆಡಳಿತಾರೂಢ ಪಕ್ಷ ಟಿಎಂಸಿ ವಿರುದ್ಧ ವ್ಯಂಗ್ಯವಾಗಿ ಉಲ್ಲೇಖಿಸಿದ ಮೋದಿ, “ನಾನು ಬಂಗಾಳದಲ್ಲಿ ಜಲ್ಮುರಿ ಸವಿದಿದ್ದೇನೆ, ಆದರೆ ಟಿಎಂಸಿ ನಾಯಕರು ಮೆಣಸಿನಕಾಯಿ ಉರಿಯನ್ನು ಅನುಭವಿಸುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದರು.
ಮೋದಿ ಗ್ಯಾರಂಟಿ
ರಾಜ್ಯಕ್ಕಾಗಿ ಹಿಂದೆ ಘೋಷಿಸಿದ್ದ “ಆರು ಚುನಾವಣಾ ಭರವಸೆಗಳ” ಜೊತೆಗೆ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಹಾಗೂ ಅಭಿವೃದ್ಧಿಗೆ ಉದ್ದೇಶಿಸಿದ ಹೊಸ 10 ‘ಮೋದಿ ಕಿ ಗ್ಯಾರಂಟಿ’ಗಳನ್ನು ಅವರು ಘೋಷಿಸಿದರು. “ಮೋದಿ ಕಿ ಗ್ಯಾರಂಟಿ ಎಂದರೆ ಅವುಗಳ ಖಚಿತ ಜಾರಿಗೆ ಸಮಾನ,” ಎಂದು ಅವರು ಹೇಳಿದರು.
“ಈ ಬಾರಿ ಟಿಎಂಸಿ ಬಂಗಾಳದ ಅನೇಕ ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆಯುವುದಿಲ್ಲ. ನಮ್ಮ ಭೂಮಿಗೆ ಅಪಾಯವಾಗುವಂತೆ ನುಸುಳುಕೋರರಿಗೆ ಬೆಂಬಲ ನೀಡುವ ಟಿಎಂಸಿ ನೀತಿಯನ್ನು ಕೊನೆಗೊಳಿಸುವ ಅಗತ್ಯವಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಜನತೆಗೆ ಭರವಸೆ ನೀಡಿದರು.
Advertisement