

ಕೊಲ್ಕೋತಾ: ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆ ಮುಗಿದಿದ್ದು 2ನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ... ಈ ಬಾರಿ ಅವರು ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಹಿಮಂತ್ ಆರೋಪಿಸಿದರು.
ಪಶ್ಚಿಮ ಬಂಗಾಳದ ಕಲ್ನಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಶರ್ಮಾ, "ಮಮತಾ ದೀದಿ 'ಇನ್ಶಾಲ್ಲಾ', 'ಖುದಾ ಹಫೀಜ್' ಎಂದು ಹೇಳುತ್ತಲೇ ಇರುತ್ತಾರೆ ಆದರೆ ಕೆಲವೊಮ್ಮೆ 'ಜೈ ಶ್ರೀ ರಾಮ್' ಎಂದು ಹೇಳುವುದನ್ನು ಕಲಿಯಬೇಕು ಮತ್ತು ಕೆಲವೊಮ್ಮೆ ದೇವತೆ ದುರ್ಗಾ ಮತ್ತು ದೇವತೆ ಕಾಳಿ ಹೆಸರನ್ನು ತೆಗೆದುಕೊಳ್ಳಬೇಕು" ಎಂದು ಹೇಳಿದರು. ಮಮತಾ ಐದು ಬಾರಿ ಹಜ್‌ಗೆ ಹೋಗಿದಂತೆ ಹಗಲಿರುಳು 'ಖುದಾ ಹಫೀಜ್' ಮತ್ತು 'ಇನ್ಶಾಲ್ಲಾ' ಎಂದು ಜಪಿಸುತ್ತಲೇ ಇರುತ್ತಾರೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಭಾಷಣದ ಶೈಲಿಯನ್ನು ಟೀಕಿಸಿದ ಶರ್ಮಾ, ದೀದಿಯವರ ಯಾವುದೇ ಭಾಷಣದ ವೀಡಿಯೊ ನೋಡಿ, ಅವರು ಮೈಕ್ ತೆಗೆದುಕೊಂಡು ಬಲಕ್ಕೆ ಹೋಗಿ ಇನ್ಶಾ ಅಲ್ಲಾ ಎನ್ನುತ್ತಾರೆ, ಎಡಕ್ಕೆ ಹೋಗಿ ಖುದಾ ಹಫೀಜ್ ಎನ್ನುತ್ತಾರೆ.
ಆದರೆ ಮಮತಾ ದೀದಿ ಅವರೇ, ಈ ಜಗತ್ತಿನಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಡ ಇದೆ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದರು. ಇನ್ಶಾ ಅಲ್ಲಾ ಹೇಳುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಬ್ಯಾನರ್ಜಿ ಅವರು ಜೈ ಶ್ರೀರಾಮ್, ಮಾ ದುರ್ಗಾ ಮತ್ತು ಮಾ ಕಾಳಿ ಎಂದು ಕರೆಯುವುದನ್ನು ಕಲಿಯಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಸೋತ ಬಳಿಕ ನಿಮಗೆ ಶಾಂತಿ ಸಿಗುವುದಿಲ್ಲ ಎಂದು ಎಚ್ಚರಿಸುತ್ತಾ, ಬಂಗಾಳದಲ್ಲಿ ಹಿಂದೂಗಳು ಕೂಡ ಇದ್ದಾರೆ ಎಂಬ ಸತ್ಯವನ್ನು ಮಮತಾ ಮರೆತಂತಿದೆ ಎಂದು ಕಿಡಿಕಾರಿದರು.
ಮಮತಾ ದೀದಿಯವರ ಬಂಗಾಳದಲ್ಲಿ ಯಾರೋ ಒಬ್ಬರು ಬಾಬರಿ ಮಸೀದಿ ಕಟ್ಟುತ್ತೇವೆ ಎನ್ನುತ್ತಾರೆ, ಇನ್ನೊಬ್ಬರು ಹುಮಾಯೂನ್ ಅಥವಾ ಶಹಜಹಾನ್ ಮಸೀದಿ ಕಟ್ಟುತ್ತೇವೆ ಎನ್ನುತ್ತಾರೆ. ನೀವು ಎಲ್ಲಿ ಬೇಕೆಂದರಲ್ಲಿ ಬಾಬರಿ ಮಸೀದಿ ನಿರ್ಮಿಸಲು ಹೇಗೆ ಸಾಧ್ಯ?, ಇದು ನಿಮ್ಮ ಅಪ್ಪನ ಆಸ್ತಿಯೇ..? ಎಂದು ಪ್ರಶ್ನಿಸಿದರು.
Advertisement