

ನವದೆಹಲಿ: ನೀಟ್ ಅಕ್ರಮ ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ಜುಲೈ 23 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಿಂದನೀಯ ಭಾಷೆ ಬಳಸಿದ್ದ 15 ವರ್ಷದ ಬಾಲಕಿ ಇದೀಗ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾಳೆ.
ಹುಡುಗಿ, ಪ್ರಧಾನಿ ಮೋದಿ ಹಾಗೂ ಇಡೀ ದೇಶದ ಕ್ಷಮೆಯಾಚಿಸಿದ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ನಟಿ ಹಾಗೂ ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಂಸದೆ ಕಂಗನಾ ರಾಣಾವತ್ ಅವರು, ಇದನ್ನು 15 ವರ್ಷದ ಹುಡುಗಿ ಮಾಡಿದ್ಲಾ ಅಥವಾ ಮಾಡಿಸಿದ್ರಾ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರುಚಿಕಾ ಸಿಂಗ್ ಕ್ಷಮಾಪಣೆ ವಿಡಿಯೋ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಕಂಗನಾ, ಯುವತಿಯರ ಮೇಲೆ "ದುಷ್ಟ ಸ್ತ್ರೀವಾದಿ ಮತ್ತು ರಾಕ್ಷಸ ಎಡಪಂಥೀಯ ಗುಂಪುಗಳ ಪ್ರಭಾವದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಆಕೆಗೆ ಕೇವಲ 15 ವರ್ಷ ವಯಸ್ಸಾಗಿದ್ದು, ಇಡೀ ಜೀವನದಲ್ಲಿ ಎಂದಿಗೂ ಮೋದಿಜಿ ವಿರುದ್ಧ ಪೋಸ್ಟ್ ಮಾಡಿರಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಆ ದಿನ ಆಕೆಯ ಸ್ನೇಹಿತರು ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಚೋದನೆ ನೀಡಿ ಇಂತಹ ಮಾತುಗಳನ್ನು ಆಡಿಸಿದ್ದಾರೆ ಎಂದು ಬಿಜೆಪಿ ಸಂಸದೆ ಆರೋಪಿಸಿದ್ದಾರೆ.
ಹೆತ್ತವರು ತಮ್ಮ ಮಕ್ಕಳನ್ನು ಇಂತಹ ಡೆಮೊನಿಕ್ ಲೆಫ್ಟಿಸ್ಟ್ ಮತ್ತು ಫೆಮಿನಾಜಿಗಳಿಂದ ರಕ್ಷಿಸಬೇಕು ಎಂದು ಬರೆದುಕೊಂಡಿರುವ ಬಿಜೆಪಿ ಸಂಸದೆ, ಇತರ ಧರ್ಮದ ಹೆಣ್ಣುಮಕ್ಕಳು ಇಂತಹ ಅಸಭ್ಯ ಪ್ರದರ್ಶನಗಳನ್ನು ಮಾಡುವುದಿಲ್ಲ, ಆದರೆ ನಮ್ಮ ಹೆಣ್ಣುಮಕ್ಕಳು ಬಹಳ ಸುಲಭವಾಗಿ ದುರ್ಬಳಕೆಯಾಗುತ್ತಿದ್ದಾರೆ. ಒಂದು ಸಮುದಾಯವಾಗಿ ನಾವು ಎಲ್ಲೋ ಸೋಲುತ್ತಿದ್ದೇವೆ, ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಂಡು ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ ಎಂದು ಕಂಗನಾ ಸಲಹೆ ನೀಡಿದ್ದಾರೆ.