

ಮುಂಬೈ: ಟೈಫಾಯ್ಡ್ ನಿಂದ ಬಳಲುತ್ತಿರುವ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಶನಿವಾರ ಮತ್ತೆ ಅಸ್ವಸ್ಥಗೊಂಡಿದ್ದು, ಮನೆಯಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಭಿಜೀತ್ ದೀಪ್ಕೆ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ನಿವಾಸದ ಪಾರ್ಕಿಂಗ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಜನರನ್ನು ಭೇಟಿಯಾಗುತ್ತಿದ್ದಾಗ ಇದ್ದಕ್ಕಿದ್ದಂತೆ ವಾಂತಿ ಮಾಡಿದ್ದಾರೆ.
ಇಂದು ಬೆಳಗ್ಗೆ 11.45ಕ್ಕೆ ತಮ್ಮ ನಿವಾಸದ ಪಾರ್ಕಿಂಗ್ ಪ್ರದೇಶದಲ್ಲಿ ತನಗಾಗಿ ಕಾಯುತ್ತಿದ್ದ ವ್ಯಕ್ತಿಗಳನ್ನು ಭೇಟಿ ಮಾಡಲು ದೀಪ್ಕೆ ಕಳಗೆ ಇಳಿದರು. ಈ ವೇಳೆ ದಿಢೀರ್ ತಮ್ಮ ನಿವಾಸದ ಹಿಂಭಾಗಕ್ಕೆ ಹೋದರು, ಅಲ್ಲಿ ಅವರು ವಾಂತಿ ಮಾಡಿಕೊಂಡರು. ಬಳಿಕ ಮಾಧ್ಯಮದೊಂದಿಗೆ ಮಾತನಾಡದೆ, ಅವರು ಮೇಲಿನ ಮಹಡಿಯ ಮನೆಗೆ ಮರಳಿದರು.
ಈ ಘಟನೆಯನ್ನು ದೃಢಪಡಿಸಿದ ಅವರ ತಂದೆ ಭಗವಾನ್ ದೀಪ್ಕೆ, ತಮ್ಮ ಮಗನನ್ನು ಪರೀಕ್ಷಿಸಲು ವೈದ್ಯರನ್ನು ಕರೆಯಲಾಗಿದೆ ಎಂದು ಹೇಳಿದರು.
ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಜುಲೈ 25 ರಂದು ದೀಪ್ಕೆ ಅವರಿಗೆ ಟೈಫಾಯ್ಡ್ ಇರುವುದು ದೃಢಪಟ್ಟಿತ್ತು. ಆದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.
ಕಳೆದ ಕೆಲವು ದಿನಗಳಿಂದ ತಾವು ಅಸ್ವಸ್ಥರಾಗಿದ್ದೇವೆ ಮತ್ತು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ದೀಪ್ಕೆ ಹೇಳಿದ್ದರು.