

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸೆಲ್ಫ್ ವಿಡಿಯೊ ಮೂಲಕ ನಿನ್ನೆ ಶುಕ್ರವಾರ ರಾತ್ರಿ ಇತ್ತೀಚಿನ ದೆಹಲಿಯ ಜಂತರ್ ಮಂತರ್ ನಲ್ಲಿ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯನ್ನು ನಿಂದಿಸಿದ ವಿದ್ಯಾರ್ಥಿಗಳನ್ನು ಕ್ಷಮಿಸುತ್ತಿರುವುದಾಗಿ ಹೇಳಿದ್ದಾರೆ. ಕಾನೂನು ಕ್ರಮವೇ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಿದ ಅವರು, ದಾರಿತಪ್ಪಿದ ಮಕ್ಕಳಿಗೆ ಸರಿಯಾದ ದಾರಿ ತೋರಿಸಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದು, ನಿಂದನೆಗಳಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ದಾರಿತಪ್ಪಿದವರಿಗೆ ದಾರಿ ತೋರಿಸೋಣ. ಒಟ್ಟಾಗಿ ಕೆಲಸ ಮಾಡೋಣ. ಭಾರತ ದೇಶಕ್ಕಾಗಿ ಕೆಲಸ ಮಾಡೋಣ ಎಂದು ಹೇಳಿಕೊಂಡಿದ್ದಾರೆ.
ನಿನ್ನೆ ತಮ್ಮ ವಿಡಿಯೊವನ್ನು ವೈಯಕ್ತಿಕ ಮನವಿಯೊಂದಿಗೆ ಆರಂಭಿಸಿದ ಪ್ರಧಾನಿ ಮೋದಿ, ಸ್ನೇಹಿತರೇ, ಇಂದು ನಾನು ನಿಮ್ಮೊಂದಿಗೆ ಮಾತ್ರ ಮಾತನಾಡಬೇಕೆಂದು ಅನಿಸುತ್ತಿದೆ. ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಇಡೀ ದೇಶ ಮತ್ತು ಜಗತ್ತು ಕಂಡಿದೆ. ಕೆಲ ತುಂಟ ಮಕ್ಕಳು ಅತ್ಯಂತ ಅಸಭ್ಯ ಮತ್ತು ನಿಂದನಾತ್ಮಕ ಭಾಷೆ ಬಳಸಿದರು. ಅದು ಯಾವುದೇ ನಾಗರಿಕ ಸಮಾಜಕ್ಕೂ ತಕ್ಕದ್ದಲ್ಲ. ಅವರು ನನ್ನನ್ನು ನಿಂದಿಸಿದರು; ನನ್ನ ತೀರಿಹೋದ ತಾಯಿಯನ್ನೂ ನಿಂದಿಸಿದರು. ಅದು ಎಷ್ಟು ಅಸಹ್ಯವಾಗಿತ್ತು ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ನೊಂದು ಹೇಳಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾದ ಬಳಿಕ ಪ್ರಧಾನಿ ಈ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.
ಎಫ್‌ಐಆರ್ ಪ್ರಕಾರ, ಜುಲೈ 23ರಂದು ಜಂತರ್ ಮಂತರ್‌ನಲ್ಲಿ ಆರೋಪಿ ಪ್ರಧಾನಿ ಮೋದಿ ವಿರುದ್ಧ "ನಿಂದನಾತ್ಮಕ ಹಾಗೂ ಆಕ್ಷೇಪಾರ್ಹ" ಭಾಷೆ ಬಳಸಿ, ಸಾಂವಿಧಾನಿಕ ಹುದ್ದೆಯ ಘನತೆಗೆ ಧಕ್ಕೆ ಉಂಟುಮಾಡಿದ್ದು, ದ್ವೇಷ ಹರಡುವ ಹಾಗೂ ಸಾರ್ವಜನಿಕ ಶಾಂತಿಯನ್ನು ಭಂಗಪಡಿಸುವ ಉದ್ದೇಶ ಹೊಂದಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ಯುವಜನರನ್ನು ದಾರಿತಪ್ಪುವುದರಿಂದ ದೂರವಿಟ್ಟು ರಾಷ್ಟ್ರ ನಿರ್ಮಾಣದತ್ತ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಬಾಲ್ಯದಲ್ಲಿ ತಪ್ಪುಗಳು ಆಗುತ್ತವೆ. ಆದರೆ ಅದೇ ಸಮಯದಲ್ಲಿ ಆ ತಪ್ಪುಗಳಿಂದ ಕಲಿಯುವ ಅವಕಾಶವೂ ಇರುತ್ತದೆ. ಅದೇ ಬಾಲ್ಯದ ಸ್ವಭಾವ. ಸಮಾಜದಲ್ಲಿರುವ ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ.
ಈ ಘಟನೆಯನ್ನು "ಸಾಂಸ್ಕೃತಿಕ ಆಘಾತ" ಎಂದು ಬಣ್ಣಿಸಿದ ಪ್ರಧಾನಿ, ಪ್ರತಿಭಟನಾಕಾರರನ್ನು ಕ್ಷಮಿಸಲು ಬಯಸುವುದಾಗಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ತಪ್ಪುಗಳು ಆಗುತ್ತವೆ. ಆದರೆ ನಮ್ಮ ಹೆಣ್ಣುಮಕ್ಕಳು ಇಂತಹ ನಿಂದನಾತ್ಮಕ ಭಾಷೆ ಬಳಸುತ್ತಿರುವುದು ಸಾಂಸ್ಕೃತಿಕ ಆಘಾತವಾಗಿದೆ ಎಂದು ಹೇಳಿದ್ದಾರೆ.
ಪ್ರತೀಕಾರದ ಬದಲು ಕರುಣೆ ತೋರಿಸುವಂತೆ ಕರೆ ನೀಡಿದ ಅವರು, ಇದು ಈ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿ ತೋರಿಸುವ ಸಮಯ. ಅವರು ದಾರಿತಪ್ಪಿದ ಮಕ್ಕಳು. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಅವರಿಗೆ ಶಿಕ್ಷೆ ವಿಧಿಸುವುದು, ನ್ಯಾಯಾಲಯಗಳ ಸುತ್ತ ಅಲೆದಾಡುವಂತೆ ಮಾಡುವುದು, ಸಮಾಜದಲ್ಲಿ ಕಿರುಕುಳ ನೀಡುವುದು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ನನ್ನ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಪ್ರಧಾನ ಮಂತ್ರಿಗಳು, ಕೆಲವೊಮ್ಮೆ ನಮ್ಮ ನಾಲಿಗೆಯೇ ಹಲ್ಲಿಗೆ ಸಿಕ್ಕಿ ಕಚ್ಚಿಕೊಂಡು ರಕ್ತ ಬರುತ್ತದೆ. ಆದರೆ ಅದಕ್ಕಾಗಿ ನಾವು ಹಲ್ಲುಗಳನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲುಗಳೂ ನಮ್ಮವು, ನಾಲಿಗೆಯೂ ನಮ್ಮದೇ. ಈ ಮಕ್ಕಳೂ ನಮ್ಮವರೇ. ಅವರಿಗೆ ದಾರಿ ತೋರಿಸುವುದು ನಮ್ಮ ಕರ್ತವ್ಯ. ದಾರಿತಪ್ಪಿದವರನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸ, ಆದರೆ ಅದನ್ನೇ ನಾವು ಮಾಡಬೇಕು ಎಂದಿದ್ದಾರೆ.
ಯುವಜನತೆಗೆ ನೇರವಾಗಿ ಮನವಿ ಮಾಡಿದ ಪ್ರಧಾನಿ, ಮಕ್ಕಳೇ, ದೇಶಕ್ಕಾಗಿ ಒಟ್ಟಾಗಿ ಮುಂದೆ ಸಾಗೋಣ. ಹೊಸದನ್ನು ಕಲಿಯೋಣ. ನಮ್ಮ ತಪ್ಪುಗಳಿಂದಲೂ ಪಾಠ ಕಲಿತು ನಮ್ಮ ಕನಸುಗಳೊಂದಿಗೆ ಮುಂದೆ ಸಾಗೋಣ ಎಂದಿದ್ದಾರೆ.
ಭರವಸೆಯ ಸಂದೇಶದೊಂದಿಗೆ ಭಾಷಣ ಮಾತುಗಳನ್ನು ಮುಗಿಸಿದ ಪ್ರಧಾನ ಮಂತ್ರಿ, ದೇಶ ಮುಂದೆ ಸಾಗುತ್ತಿದೆ, ಮುಂದೆಯೂ ಸಾಗುತ್ತದೆ. ನಿಮ್ಮ ಪ್ರಗತಿಯೂ ಖಚಿತ. ಅದೇ ನನ್ನ ಕನಸು. ನಾನು ನಿಮಗಾಗಿ ಬದುಕುತ್ತೇನೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತೇನೆ. ಬನ್ನಿ, ಒಟ್ಟಾಗಿ ದೇಶವನ್ನು ಮುನ್ನಡೆಸೋಣ. ತುಂಬಾ ಧನ್ಯವಾದಗಳು ಸ್ನೇಹಿತರೇ. ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಿರಿ ಎಂದು ಹೇಳಿದ್ದಾರೆ.
ದೆಹಲಿ ಜಂತರ್ ಮಂತರ್‌ನಲ್ಲಿ ಯುವಜನರ ನೇತೃತ್ವದಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ಜುಲೈ 25ರಂದು ಅಂತ್ಯಗೊಂಡಿತ್ತು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಲು ಸಾವಿರಾರು ವಿದ್ಯಾರ್ಥಿ ಹೋರಾಟಗಾರರು, 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ಹೋರಾಟಗಾರ ಸೋನಂ ವಾಂಗ್ಚುಕ್ ಅವರೊಂದಿಗೆ ಸೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತೀವ್ರ ಪ್ರತಿಭಟನೆಗಳು, ಪೊಲೀಸರೊಂದಿಗೆ ಸಂಘರ್ಷದ ವಾತಾವರಣ ಹಾಗೂ ಜುಲೈ 20ರಂದು ಸಂಸತ್‌ವರೆಗೆ ನಡೆದ ಭಾರಿ ಮೆರವಣಿಗೆಯ ಬಳಿಕ, ಈ ಹೋರಾಟದ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.
ಶಿಕ್ಷಣ ಕ್ಷೇತ್ರದ ಸುಧಾರಣೆ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ಬಳಿಕ, ಸಿಜೆಪಿ ಅಧಿಕೃತವಾಗಿ ಪ್ರತಿಭಟನೆಯನ್ನು ಅಂತ್ಯಗೊಳಿಸಿತು.