

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಸೀಟಿನ ವಿಚಾರದಲ್ಲಿ ವಾಗ್ವಾದ ನಡೆದು, ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಪ್ಯಾಂಟ್ ಬೆಲ್ಟ್ ನಿಂದ ಹಲ್ಲೆ, ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗೋರೆಗಾಂವ್‌ನಿಂದ ಸಿಎಸ್‌ಎಂಟಿ (CSMT) ಕಡೆಗೆ ಸಂಚರಿಸುತ್ತಿದ್ದ ಹಾರ್ಬರ್ ಲೈನ್ ಲೋಕಲ್ ರೈಲಿನಲ್ಲಿ ಇತ್ತೀಚಿಗೆ ಈ ಘಟನೆ ನಡೆದಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ರಿಜ್ವಾನ್ ಅನ್ಸಾರಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
36 ವರ್ಷದ ಮೊಹಮ್ಮದ್ ರಿಜ್ವಾನ್ ಅನ್ಸಾರಿ ಸೀಟಿನ ವಿಷಯವಾಗಿ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅನ್ಸಾರಿ ಆ ಮಹಿಳೆಯ ಮೇಲೆ ಕೈ ಹಾಗೂ ಬೆಲ್ಟ್‌ನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ, ಅಂಧೇರಿ ಸರ್ಕಾರಿ ರೈಲ್ವೆ ಪೊಲೀಸರು (GRP) ಆರೋಪಿ ಅನ್ಸಾರಿಯನ್ನು ಪತ್ತೆಹಚ್ಚಿ ವಡಾಲಾದಲ್ಲಿ ಬಂಧಿಸಿದ್ದಾರೆ.
ಮಹಿಳೆಗೆ ಅಪಮಾನ ಮಾಡುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗಕ್ಕೆ ಸಂಬಂಧಿಸಿದ 'ಭಾರತೀಯ ನ್ಯಾಯ ಸಂಹಿತೆ'ಯ (BNS) ಸೆಕ್ಷನ್ 74ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.