‘ಸಪ್ತಧಾರ’ – ಪ್ರಧಾನಿ ಮೋದಿ ಹೇಳಿದ ಭಾರತದ ‘ಶಕ್ತಿ’ಯ ಏಳು ಪ್ರವಾಹಗಳು ಯಾವುದು?

ಈ ಏಳು ಕ್ಷೇತ್ರಗಳ ಸಾಮರ್ಥ್ಯವನ್ನು ಬಳಸಿಕೊಂಡು ದೇಶ ಮುನ್ನಡೆಯಬೇಕು ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ, ಈ ‘ಸಪ್ತಧಾರ’ಗಳು ಭಾರತವನ್ನು ಆತ್ಮನಿರ್ಭರ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿವೆ ಎಂದು ಹೇಳಿದರು.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಭಾರತದ ‘ಶಕ್ತಿ’ ಮತ್ತು ಮುಂದಿನ ಹಂತದ ಅಭಿವೃದ್ಧಿಗೆ ಚಾಲನೆ ನೀಡುವ ಏಳು ಪ್ರಮುಖ ಕ್ಷೇತ್ರಗಳನ್ನು ವಿವರಿಸಿದರು. ಅವುಗಳನ್ನು ಅವರು ‘ಸಪ್ತಧಾರ’ ಎಂದು ಕರೆದರು.

ಈ ಏಳು ಕ್ಷೇತ್ರಗಳ ಸಾಮರ್ಥ್ಯವನ್ನು ಬಳಸಿಕೊಂಡು ದೇಶ ಮುನ್ನಡೆಯಬೇಕು ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ, ಈ ‘ಸಪ್ತಧಾರಾ’ಗಳು ಭಾರತವನ್ನು ಆತ್ಮನಿರ್ಭರ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿವೆ ಎಂದು ಹೇಳಿದರು.

ಇಂದು ದೆಹಲಿಯ ಕೆಂಪುಕೋಟೆಯ ಕೋಟೆಗೋಡೆಯಿಂದ ನಾನು ದೇಶಕ್ಕೆ ಕರೆ ನೀಡುತ್ತೇನೆ. ‘ಶಕ್ತಿಯ ಸಪ್ತಧಾರಾ’ವನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ ಹೇಳಿದರು.

ಭಾರತದ ‘ಸಪ್ತಧಾರಾ’ಗಳೆಂದರೆ ಉತ್ಪಾದನೆ, ಕೃಷಿ, ತಂತ್ರಜ್ಞಾನ, ಗತಿಶಕ್ತಿ, ರಕ್ಷಣಾ ಶಕ್ತಿ, ಹಸಿರು ಇಂಧನ ಮತ್ತು ಸಾಫ್ಟ್ ಪವರ್ ಎಂದು ಪ್ರಧಾನಿ ಮೋದಿ ಪಟ್ಟಿ ಮಾಡಿದರು.

1. ಉತ್ಪಾದನೆ (Manufacturing)

ಉತ್ಪಾದನಾ ಕ್ಷೇತ್ರಕ್ಕೆ ಭಾರಿ ಉತ್ತೇಜನ ನೀಡುವಂತೆ ಕರೆ ನೀಡಿದ ಪ್ರಧಾನಿ, ಇದು ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯ ಎಂಜಿನ್ ಎಂದು ಹೇಳಿದರು. ನಮಗೆ ಬಿಡಿಭಾಗಗಳೂ ಬೇಕು, ಸಂಪೂರ್ಣ ಉತ್ಪನ್ನಗಳೂ ಬೇಕು ಎಂದು ಹೇಳಿದ ಪ್ರಧಾನಿ, ಭಾರತವು ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಕೇಂದ್ರವಾಗಬೇಕು ಎಂದು ಕರೆ ನೀಡಿದರು.

ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ವೆಚ್ಚ, ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದ ಅವರು, ಜಾಗತಿಕ ವೇದಿಕೆಯಲ್ಲಿ ಸ್ಪರ್ಧಾತ್ಮಕವಾಗಬೇಕು ಎಂದರು.

ನಮ್ಮ ಪ್ಯಾಕೇಜಿಂಗ್ ಜನರನ್ನು ಆಕರ್ಷಿಸುವಂತಿರಬೇಕು ಮತ್ತು ನಮ್ಮ ನಿಖರತೆಯೇ ನಮ್ಮ ಗುರುತಾಗಬೇಕು ಎಂದು ಮೋದಿ ಹೇಳಿದರು.

2. ಕೃಷಿ (Farming)

ಕೃಷಿ ಮತ್ತು ಆಹಾರ ಸಂಸ್ಕರಣೆಯನ್ನು ‘ಸಪ್ತಧಾರಾ’ದ ಎರಡನೇ ಪ್ರವಾಹ ಎಂದು ಪ್ರಧಾನಿ ಮೋದಿ ಗುರುತಿಸಿದರು.

ನಾವು ಈ ದಿಕ್ಕಿನಲ್ಲಿ ಮುಂದುವರಿಯಬೇಕು. ಜಗತ್ತಿನ ಮಾರುಕಟ್ಟೆಗಳು ಈಗ ನಮ್ಮ ರೈತರಿಗೆ ಮುಕ್ತವಾಗಿವೆ. ಮುಕ್ತ ವ್ಯಾಪಾರ ಒಪ್ಪಂದಗಳಿಂದಾಗಿ ನಾವು ಬಹುದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯುತ್ತಿದ್ದೇವೆ. ನಾವು ಅಲ್ಲಿಗೆ ತಲುಪಬೇಕು ಎಂದು ಹೇಳಿದರು.

ಕೃಷಿ ಭೂಮಿಯಿಂದ ನೇರವಾಗಿ ರಫ್ತು ಮಾರುಕಟ್ಟೆಯತ್ತ ಸಾಗಬೇಕು. ನಮ್ಮ ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಸಿರಿಧಾನ್ಯಗಳು, ಮಸಾಲೆಗಳು, ಹಣ್ಣುಗಳು ಮತ್ತು ತರಕಾರಿಗಳು ಜಾಗತಿಕ ಬ್ರ್ಯಾಂಡ್‌ಗಳಾಗಬೇಕು ಎಂದು ಪ್ರಧಾನಿ ಹೇಳಿದರು.

3. ತಂತ್ರಜ್ಞಾನ (Technology)

ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಮೂರನೇ ಕ್ಷೇತ್ರವೆಂದು ಪ್ರಧಾನಿ ಮೋದಿ ಹೇಳಿದರು.

“ಇದು ದತ್ತಾಂಶ ಕೇಂದ್ರಗಳು, ರೋಬೋಟಿಕ್ಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಯುಗ. ಆದ್ದರಿಂದ ಭಾರತವು ಈ ತಂತ್ರಜ್ಞಾನಗಳ ಕೇಂದ್ರವಾಗಬೇಕು” ಎಂದರು.

UPIಯ ಪರಿಚಯದ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ಹೇಳಿದ ಪ್ರಧಾನಿ, ಭಾರತದಲ್ಲಿ ಅಭಿವೃದ್ಧಿಪಡಿಸಲಾದ 6G ದೇಶದಾದ್ಯಂತ ತಲುಪುವ ಗುರಿ ಹೊಂದಬೇಕು ಎಂದರು.

“UPI ಮತ್ತು ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಮೂಲಕ ನಾವು ಈಗಾಗಲೇ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೇವೆ. ಈಗ ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಬೇಕಾಗಿದೆ” ಎಂದು ಮೋದಿ ಹೇಳಿದರು.

4. ಗತಿಶಕ್ತಿ (Gatishakti)

ದೇಶದಾದ್ಯಂತ ವೇಗ ಮತ್ತು ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ವ್ಯವಹಾರಗಳಿಗೆ ಉತ್ತೇಜನ ನೀಡಲು ಹೊಸ ರಸ್ತೆಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ತಡೆರಹಿತ ಮತ್ತು ವೇಗದ ಸಂಪರ್ಕಕ್ಕೆ ನಾವು ಒತ್ತು ನೀಡಬೇಕು. ನಮ್ಮ ನಗರಗಳು ಹೈಸ್ಪೀಡ್ ರೈಲುಗಳ ಮೂಲಕ ಸಂಪರ್ಕಗೊಳ್ಳಬೇಕು. ಬಂದರು ಆಧಾರಿತ ಅಭಿವೃದ್ಧಿಗೂ ನಾವು ಗಮನ ನೀಡಬೇಕು ಎಂದು ಪ್ರಧಾನಿ ಹೇಳಿದರು.

5. ರಕ್ಷಣಾ ಶಕ್ತಿ – ಆತ್ಮನಿರ್ಭರ ರಕ್ಷಣೆ (Raksha Shakti)

ರಕ್ಷಣಾ ಕ್ಷೇತ್ರವನ್ನು ‘ಸಪ್ತಧಾರಾ’ದ ಐದನೇ ಪ್ರವಾಹ ಎಂದು ಪ್ರಧಾನಿ ಮೋದಿ ಹೇಳಿದರು.

ರಕ್ಷಣಾ ಉತ್ಪಾದನೆ ಮತ್ತು ಆತ್ಮನಿರ್ಭರ ರಕ್ಷಣಾ ವ್ಯವಸ್ಥೆ ನಿರ್ಮಾಣದತ್ತ ಭಾರತ ಕೆಲಸ ಮಾಡಬೇಕು ಎಂದರು.

ವಿಶೇಷವಾಗಿ ಡ್ರೋನ್ ಮತ್ತು ಕೌಂಟರ್-ಡ್ರೋನ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಬೇಕಿದೆ ಎಂದು ಪ್ರಧಾನಿ ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದು ಅತ್ಯಗತ್ಯ. ಇದರ ಅಗತ್ಯವನ್ನು ಭಾರತ ಮಾತ್ರವಲ್ಲ, ಇಡೀ ಜಗತ್ತು ಈಗ ಅನುಭವಿಸಿದೆ. ಪ್ರತಿಯೊಂದು ದೇಶವೂ ತನ್ನದೇ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಿರುವಾಗ ಭಾರತ ಕೇವಲ ಜಗತ್ತಿನ ಮಾರುಕಟ್ಟೆಯಾಗಿ ಉಳಿಯಲು ಸಾಧ್ಯವಿಲ್ಲ. ರಕ್ಷಣಾ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಬೇಕು ಎಂದು ಮೋದಿ ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆಗೆ ಕರೆ ನೀಡಿದ ಅವರು, ಭಾರತವು ಇನ್ನು ಮುಂದೆ ರಕ್ಷಣಾ ಉಪಕರಣಗಳ ಪೂರೈಕೆದಾರ ರಾಷ್ಟ್ರವಾಗಬೇಕು ಎಂದರು.

ಮುಂದಿನ ಪೀಳಿಗೆಯ ರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ರಕ್ಷಣಾ ಉಪಕರಣಗಳ ಪೂರೈಕೆದಾರರಾಗುವ ದಿಕ್ಕಿನಲ್ಲಿ ನಾವು ಮುನ್ನಡೆಯಬೇಕು ಎಂದು ಪ್ರಧಾನಿ ಹೇಳಿದರು.

6. ಹಸಿರು ಮತ್ತು ನೀಲಿ ಆರ್ಥಿಕತೆ (Green & Blue Economy)

ಹಸಿರು ಇಂಧನವನ್ನು ‘ಸಪ್ತಧಾರಾ’ದ ಆರನೇ ಪ್ರವಾಹ ಎಂದು ಗುರುತಿಸಿದ ಪ್ರಧಾನಿ, ಹಸಿರು ಇಂಧನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ನಾವೀನ್ಯತೆ ಅಗತ್ಯವಿದೆ ಎಂದರು.

“ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂಗ್ರಹಣೆಯಲ್ಲಿ ಭಾರತ ಜಾಗತಿಕ ನಾಯಕತ್ವ ಸಾಧಿಸಬೇಕು. ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ನೀಡುವುದನ್ನು ಮುಂದುವರಿಸಬೇಕು” ಎಂದು ಅವರು ಹೇಳಿದರು.

ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ ಮತ್ತು ಸಾಗರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನೀಲಿ ಆರ್ಥಿಕತೆಯು ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯಲಿದೆ ಎಂದರು.

7. ಸಾಫ್ಟ್ ಪವರ್ (Soft Power)

ಭಾರತದ ‘ಸಾಫ್ಟ್ ಪವರ್’ ನ್ನು ‘ಸಪ್ತಧಾರಾ’ದ ಏಳನೇ ಪ್ರವಾಹ ಎಂದು ಪ್ರಧಾನಿ ಮೋದಿ ಹೇಳಿದರು.

ಯೋಗ, ಕರಕುಶಲ ಕಲೆ, ಚಲನಚಿತ್ರಗಳು, ಅನಿಮೇಷನ್, ಗೇಮಿಂಗ್, ಡಿಜಿಟಲ್ ಕಂಟೆಂಟ್ ಮತ್ತು ಸೃಜನಶೀಲ ಕ್ಷೇತ್ರಗಳನ್ನು ಭಾರತದ ಸಾಫ್ಟ್ ಪವರ್‌ನ ಉದಾಹರಣೆಗಳಾಗಿ ಅವರು ಉಲ್ಲೇಖಿಸಿದರು.

ಭಾರತವು ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ಕೆಲಸ ಮಾಡಬೇಕಿದೆ ಎಂದರು.

ದೇಶದಲ್ಲಿರುವ ಹಲವಾರು ರಾಷ್ಟ್ರೀಯ ಉದ್ಯಾನಗಳು, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರ ಪ್ರವಾಸಿ ತಾಣಗಳು ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿವೆ ಎಂದು ಪ್ರಧಾನಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com