

ನವದೆಹಲಿ: 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತವು ಪ್ರಬಲ ಸ್ಪರ್ಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದೇ ವೇಳೆ 5ರಿಂದ 15 ವರ್ಷದೊಳಗಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣಾ ಅಭಿಯಾನ ಆರಂಭಿಸಲಾಗುವುದು ಎಂದು ಘೋಷಿಸಿದರು.
80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2014ರಲ್ಲಿ ಆರಂಭಿಸಲಾದ ಸರ್ಕಾರದ ಪ್ರಮುಖ ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್’ (TOPS) ಕ್ರೀಡಾಪಟುಗಳಿಗೆ ಬೆಂಬಲ ನೀಡುವಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ ಎಂದು ಹೇಳಿದರು.
ಭಾರತ ಕ್ರೀಡಾ ಜಗತ್ತಿನಲ್ಲಿ ತನ್ನದೇ ಸ್ಥಾನವನ್ನು ನಿರ್ಮಿಸಿಕೊಳ್ಳುತ್ತಿದೆ. ನಮ್ಮ ರಾಷ್ಟ್ರಗೀತೆ ಪದೇಪದೇ ಮೊಳಗುತ್ತಿರುವುದನ್ನು ಮತ್ತು ನಮ್ಮ ತ್ರಿವರ್ಣ ಧ್ವಜ ಆಗಾಗ್ಗೆ ಹಾರಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. TOPS ಉತ್ತಮ ಯಶಸ್ಸು ಸಾಧಿಸಿದೆ. ಖೇಲೋ ಇಂಡಿಯಾ ಗೇಮ್ಸ್, ಯೂನಿವರ್ಸಿಟಿ ಗೇಮ್ಸ್, ಬೀಚ್ ಗೇಮ್ಸ್, ವಿಂಟರ್ ಗೇಮ್ಸ್ ಆಗಿರಲಿ ಅಥವಾ ಕ್ರೀಡಾ ತರಬೇತಿ, ಕ್ರೀಡಾ ವೈದ್ಯಕೀಯ, ಕ್ರೀಡಾ ಪೌಷ್ಟಿಕಾಂಶ ಕ್ಷೇತ್ರವಾಗಿರಲಿ, ಭಾರತ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಭಾರತದ ಕ್ರೀಡಾ ಸಾಧನೆ ಸುಧಾರಿಸುತ್ತಿದ್ದು, 2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಪ್ರಬಲ ಸ್ಪರ್ಧಿಯಾಗಿದೆ ಎಂದು ಪ್ರಧಾನಿ ಹೇಳಿದರು.
2030ರಲ್ಲಿ ನಾವು ಕಾಮನ್‌ವೆಲ್ತ್ ಗೇಮ್ಸ್ (CWG) ಆಯೋಜಿಸುತ್ತಿದ್ದೇವೆ. ಒಲಿಂಪಿಕ್ಸ್‌ನಲ್ಲಿ ಸುಮಾರು 40 ಕ್ರೀಡಾ ವಿಭಾಗಗಳು ಮತ್ತು ಸುಮಾರು 350 ಸ್ಪರ್ಧೆಗಳಿವೆ. ಆದರೆ ಈ ಸ್ಪರ್ಧೆಗಳ ಕನಿಷ್ಠ ಮೂರನೇ ಎರಡರಷ್ಟು ವಿಭಾಗಗಳಲ್ಲಿ ಸ್ಪರ್ಧಿಸಲು ಕೂಡ ನಮಗೆ ಸಾಧ್ಯವಾಗುತ್ತಿಲ್ಲ ಎಂಬುದು ವಿಷಾದಕರ. ಏಕೆಂದರೆ ನಾವು ಅರ್ಹತೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
2036ರ ವೇಳೆಗೆ ಕನಿಷ್ಠ ಮುಕ್ಕಾಲು ಭಾಗದ ಸ್ಪರ್ಧೆಗಳಲ್ಲಿ ಭಾರತ ಭಾಗವಹಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ದೇಶದ ಪ್ರತಿಯೊಂದು ಮೂಲೆಮೂಲೆಗಳಲ್ಲಿರುವ 5ರಿಂದ 15 ವರ್ಷದ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣಾ ಅಭಿಯಾನ ಆರಂಭಿಸುತ್ತಿದ್ದೇವೆ. ಅವರಿಗೆ ವಿಶ್ವಮಟ್ಟದ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ವಿಶೇಷ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಭಾರತವು 2030ರ ಕಾಮನ್‌ವೆಲ್ತ್ ಗೇಮ್ಸ್ ನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲಿದೆ. ಇದೇ ಅಹಮದಾಬಾದ್ 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಸ್ಪರ್ಧೆಯಲ್ಲಿದೆ.