ಸ್ವಾತಂತ್ರ್ಯ ದಿನಾಚರಣೆ ವೇಳೆ ಜಾರ್ಖಂಡ್ ನಲ್ಲಿ ಹೈಡ್ರಾಮಾ: ತಿರಂಗಾ ಯಾತ್ರೆಗೆ ತೆರಳದಂತೆ JLKM ನಾಯಕನ ತಡೆದ ಪೊಲೀಸರು, Video

ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (JLKM) ನಾಯಕ ದೇವೇಂದ್ರನಾಥ್ ಮಾಝ್ಟೋ ಅವರನ್ನು ಪೊಲೀಸರು ತಡೆದ ಘಟನೆ ರಾಂಚಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Jharkhand Activist Stopped From Joining Tiranga Yatra
ತಿರಂಗಾ ಯಾತ್ರೆಗೆ ತೆರಳದಂತೆ JLKM ನಾಯಕನ ತಡೆದ ಪೊಲೀಸರು
Updated on

ರಾಂಚಿ: ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಜಾರ್ಖಂಡ್ ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದ್ದು, ಜಾರ್ಖಂಡ್‌ನ ವಿದ್ಯಾರ್ಥಿ ಪ್ರತಿಭಟನಾಕಾರರು ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮುಂದಾದ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (JLKM) ನಾಯಕ ದೇವೇಂದ್ರನಾಥ್ ಮಾಝ್ಟೋ ಅವರನ್ನು ಪೊಲೀಸರು ತಡೆದ ಘಟನೆ ರಾಂಚಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ರಾಂಚಿಯ ಸದರ್ ಆಸ್ಪತ್ರೆಯಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಕುತ್ತಿಗೆಗೆ ತಿರಂಗಾ ಬಣ್ಣದ ಸ್ಕಾರ್ಫ್ ಧರಿಸಿ, ಹಣೆಯ ಮೇಲೆ ತಿರಂಗಾ ಬ್ಯಾಂಡಾನಾ ಕಟ್ಟಿಕೊಂಡಿದ್ದ ಮಾಝ್ಟೋ ಅವರು ಆಸ್ಪತ್ರೆಯಿಂದ ಹೊರಗೆ ತೆರಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ.

ಪೊಲೀಸರು ತಡೆಯುತ್ತಿದ್ದಂತೆ ಮಾಝ್ಟೋ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಹಾಗೂ ನೂಕಾಟ ನಡೆದಿದೆ. ಬಳಿಕ ಪೊಲೀಸರು ಅವರನ್ನು ಎಳೆದುಕೊಂಡು ಹೋಗಿ ಮತ್ತೆ ಆಸ್ಪತ್ರೆಯ ಕೊಠಡಿಯೊಳಗೆ ಕರೆದೊಯ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Jharkhand Activist Stopped From Joining Tiranga Yatra
ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಆಗಿದ್ದೇನು?

ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮಾಝ್ಟೋ ಅವರನ್ನು ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಪ್ರಮುಖ ಕೇಂದ್ರವಾಗಿರುವ ಇದೇ ಕ್ರೀಡಾಂಗಣದಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜಾರ್ಖಂಡ್ ಲೋಕಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (JSSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

14ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಉಪವಾಸ

ಮಾಝ್ಟೋ ಅವರು ಆಗಸ್ಟ್ 2ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದೀಗ 14ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ನಡೆಸಿದ ರಾಂಚಿ ವಿಧಾನಸಭಾ ಘೇರಾವ್ ಪ್ರತಿಭಟನೆ ಗೊಂದಲಕ್ಕೆ ತಿರುಗಿದ ಬಳಿಕ ಪೊಲೀಸರು ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಹಾಗೂ ಜಲಫಿರಂಗಿ ಬಳಸಿದ್ದರು. ಈ ವೇಳೆ ಮಾಝ್ಟೋ ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಿರಂಗಾ ಯಾತ್ರೆಗೆ ತೆರಳದಂತೆ ಪೊಲೀಸರು ತಡೆದಿರುವ ಕುರಿತು ಪ್ರತಿಕ್ರಿಯಿಸಿದ ಮಾಝ್ಟೋ, “ನಾನು ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯಲಾಗಿದೆ. ನನ್ನ ಸ್ವಂತ ಜವಾಬ್ದಾರಿಯಲ್ಲಿ ಆಸ್ಪತ್ರೆಯಿಂದ ತೆರಳುವುದಾಗಿ ಹಾಗೂ ನನ್ನ ಆರೋಗ್ಯಕ್ಕೆ ಆಸ್ಪತ್ರೆ ಆಡಳಿತ ಹೊಣೆಗಾರವಾಗಿರುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದೆ. ಆದರೂ ನನ್ನನ್ನು ಬಲವಂತವಾಗಿ ತಡೆಯಲಾಗಿದೆ” ಎಂದು ಹೇಳಿದ್ದಾರೆ.

‘ಇದು ಯಾವ ರೀತಿಯ ಸ್ವಾತಂತ್ರ್ಯ?’

ಇದಕ್ಕೂ ಮುನ್ನ ಮಾಝ್ಟೋ ಅವರು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ ಬಳಿಕ ತಮ್ಮ ಆಸ್ಪತ್ರೆ ಕೊಠಡಿಯ ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

“ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಧ್ವಜಾರೋಹಣ ಮತ್ತು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ ಬಳಿಕ ಸದರ್ ಆಸ್ಪತ್ರೆಯ ನನ್ನ ಕೊಠಡಿಯ ಹೊರಗೆ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಇದು ಯಾವ ರೀತಿಯ ಸ್ವಾತಂತ್ರ್ಯ? ನಮ್ಮದೇ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮತ್ತು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಮಗೆ ಸ್ವಾತಂತ್ರ್ಯವಿಲ್ಲವೇ? ಕಷ್ಟಕರ ಪರಿಸ್ಥಿತಿಯ ನಡುವೆಯೂ ಶಾಂತಿಯುತವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದರು.

ಮಾಝ್ಟೋ ಅವರನ್ನು ತಿರಂಗಾ ಯಾತ್ರೆಗೆ ಕರೆದೊಯ್ಯಲು ಅವರ ಬೆಂಬಲಿಗರು ಪ್ರಯತ್ನಿಸಿದಾಗ ಪೊಲೀಸರೊಂದಿಗೆ ತೀವ್ರ ವಾಗ್ವಾದ ಹಾಗೂ ದೈಹಿಕ ಘರ್ಷಣೆಯೂ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ವಾತಂತ್ರ್ಯ ದಿನದಂದು ನಡೆದ ಈ ಬೆಳವಣಿಗೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com