

ನಿನ್ನೆ ಶನಿವಾರ ದೇಶದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿತು.
ಆದರೆ ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು, ವಂದೇ ಮಾತರಂನ ಪೂರ್ಣ ಆವೃತ್ತಿಯ ಗಾಯನವನ್ನು ತಡೆಯುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಸಮಯದಿಂದ ನಿಂತಿದ್ದ ಕಾರಣ ಅವರಿಗೆ ಕುರ್ಚಿ ತರುವಂತೆ ಸೋನಿಯಾ ಗಾಂಧಿ ಕೇಳಿದ್ದರು ಎಂದು ಕಾಂಗ್ರೆಸ್ ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಹಲವು ಕೇಂದ್ರ ಸಚಿವರು, ರಾಜ್ಯ ಬಿಜೆಪಿ ನಾಯಕರು, ಬಿಜೆಪಿ ಬೆಂಬಲಿಗರು, ಸಾರ್ವಜನಿಕರು ಇದರ ವಿಡಿಯೊವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸೋನಿಯಾ ಗಾಂಧಿಯವರನ್ನು, ಗಾಂಧಿ ಮನೆತನವನ್ನು ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ವಂದೇ ಮಾತರಂ ದೇಶಭಕ್ತಿಗೀತೆ ಗಾಂಧಿ ಕುಟುಂಬಕ್ಕೆ ರುಚಿಸುವುದಿಲ್ಲ ಎನಿಸುತ್ತದೆ, ದೇಶದ್ರೋಹಿಗಳು, ಇಂಥವರ ಕೈಗೆ ದೇಶದ ಆಡಳಿತ ಕೊಟ್ಟರೆ ಹೇಗೆ ಎಂದು ಟೀಕಿಸುತ್ತಿದ್ದಾರೆ.
1947ರ ಪೂರ್ವದಿಂದ 1947ರ ನಂತರದವರೆಗೂ ಕೆಲವು ಮನಸ್ಥಿತಿಗಳು ಎಂದಿಗೂ ಬದಲಾಗುವುದಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಟೀಕಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಂಚಿಕೊಂಡಿರುವ ವಿಡಿಯೊ
ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮತ್ತೊಂದು ವಿಡಿಯೊ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಪೂರ್ತಿ ವಂದೇ ಮಾತರಂ ಹಾಡಬಾರದು ಎಂದು ಕಾರ್ಯಕರ್ತರಿಗೆ ಹೇಳುತ್ತಿರುವುದು ಕಾಣುತ್ತದೆ.
ಭಾರತದ ಸಂಸ್ಕೃತಿ ಮತ್ತು ಆಳವಾಗಿ ಬೇರೂರಿರುವ ರಾಷ್ಟ್ರೀಯ ಭಾವನೆಯ ವಿಚಾರದಲ್ಲಿ ಗಾಂಧಿ ಕುಟುಂಬವು ಇಷ್ಟೊಂದು ಅಸಹಜವಾಗಿ ವರ್ತಿಸುತ್ತಿರುವಂತೆ ಏಕೆ ಕಾಣಿಸುತ್ತದೆ, ಭಾರತದ ಸಂಪ್ರದಾಯಗಳು, ಪರಂಪರೆ ಮತ್ತು ದೇಶಭಕ್ತಿಯ ಮನೋಭಾವದಲ್ಲಿ ಅವರಿಗೆ ಅಸಮಾಧಾನ ಉಂಟುಮಾಡುವಂಥದ್ದು ಏನಿದೆ?
ಇಂದು ಕಾಂಗ್ರೆಸ್ ನಾಯಕತ್ವವು ಮತ್ತೊಮ್ಮೆ ವಂದೇ ಮಾತರಂನ ಪೂರ್ಣ ಆವೃತ್ತಿಯ ಗಾಯನದ ಬಗ್ಗೆ ತನ್ನ ಅಸಮಾಧಾನವನ್ನು ಬಹಿರಂಗಪಡಿಸಿದಂತೆ ಕಾಣುತ್ತಿದೆ. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇಮಾತರಂ ಗಾಯನ ನಡೆಯುತ್ತಿದ್ದ ವೇಳೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವರ್ತನೆ ಅತ್ಯಂತ ನಾಚಿಕೆಗೇಡಿತನದ್ದಾಗಿದ್ದು, ಅದನ್ನು ತೀವ್ರವಾಗಿ ಖಂಡಿಸಬೇಕಾಗಿದೆ ಎಂದಿದ್ದಾರೆ.
ಬಿಜೆಪಿ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್, ಇಂದು ಸ್ವಾತಂತ್ರ್ಯ ದಿನದಂದು ಬೆಳಕಿಗೆ ಬಂದಿರುವ ದೃಶ್ಯ ಅತ್ಯಂತ ನಾಚಿಕೆಗೇಡಿತನದ್ದು. ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗಾಯನದ ವೇಳೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು ಹಾಗೂ ಅದನ್ನು ಏಕೆ ಹಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿರುವುದು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, ವಂದೇ ಮಾತರಂನ ಮೊದಲ ಕೆಲವು ಚರಣಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ಹಾಡುವ ಸಂಪ್ರದಾಯದ ಇತಿಹಾಸವನ್ನು ವಿವರಿಸಿದರು.
ಕೋಲ್ಕತ್ತಾದಲ್ಲಿ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರಲಾಲ್ ನೆಹರು, ಗೋವಿಂದ್ ಬಲ್ಲಭ್ ಪಂತ್ ಮತ್ತು ಸಿ. ರಾಜಗೋಪಾಲಾಚಾರಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯಂತೆ ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇ ಮಾತರಂನ ಆರಂಭಿಕ ಚರಣಗಳನ್ನು ಹಾಡಲು ನಿರ್ಧರಿಸಲಾಯಿತು ಎಂದರು.
ಅಂದಿನಿಂದ ಪ್ರತಿಯೊಂದು ಅಧಿವೇಶನದಲ್ಲೂ ನಾವು ಆ ಸಾಲುಗಳನ್ನು ಹಾಡುತ್ತಿದ್ದೇವೆ. ನಮ್ಮ ಸೇವಾದಳ ಹಾಡುತ್ತದೆ, ನಮ್ಮ ಕಾರ್ಯಕರ್ತರು ಹಾಡುತ್ತಾರೆ. ಈ ವಿಚಾರದಲ್ಲಿ ಯಾವುದೇ ವಿವಾದವಿಲ್ಲ ಎಂದು ರಮೇಶ್ ಹೇಳಿದರು. ಶನಿವಾರ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಕುರಿತು ಸಂಸತ್ತಿನಲ್ಲಿ 16 ಗಂಟೆಗಳ ಕಾಲ ಚರ್ಚೆ ನಡೆಯಿತು. ನಾವು ನಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದೇವೆ. ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೆ ತಿಳಿದಿರದ ವಂದೇ ಮಾತರಂ ಕುರಿತ ಸಂಪೂರ್ಣ ಇತಿಹಾಸವನ್ನು ನಾನು ವಿವರಿಸಿದೆ. ವಂದೇ ಮಾತರಂ ಕುರಿತ ನಿರ್ಧಾರ ಕೈಗೊಂಡ ಸಂದರ್ಭದ ಹಿನ್ನೆಲೆಯನ್ನು ಸಂಸದರಿಗೆ ತಿಳಿಸಿದೆ ಎಂದು ರಮೇಶ್ ಹೇಳಿದರು.
ಆದರೆ ಇಂದು ಇಂದಿರಾ ಭವನದಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ವಿವಾದದ ಪ್ರಶ್ನೆಯೇ ಇಲ್ಲ. ಪೂರ್ಣ ಗೀತೆಯ ಗಾಯನವನ್ನು ತಡೆಯುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.